ಕೆರೆ ಒತ್ತುವರಿ ತೆರವು ನಿಲ್ಲಿಸಲು ಕುಮಾರಸ್ವಾಮಿ ಆಗ್ರಹ
ಬೆಂಗಳೂರು, ಮೇ 12 : 'ಕೆರೆ ಒತ್ತುವರಿ ಮಾಡಿಕೊಂಡು ಅಮಾಯಕರಿಗೆ ಮಾರಾಟ ಮಾಡಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿರುವವರು ಯಾವುದೇ ಪಕ್ಷದಲ್ಲಿದ್ದರೂ ಪತ್ತೆಹಚ್ಚಿ ಗಲ್ಲಿಗೆ ಹಾಕಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಿ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಬಾಣಸವಾಡಿ, ಸಾರಕ್ಕಿ, ಜರಗನಹಳ್ಳಿ, ಇಟ್ಟುಮಡು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮನೆಗಳನ್ನು ಕಳೆದುಕೊಂಡ ಜನರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಸಂತ್ರಸ್ತರ ಅಳಲನ್ನು ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. [ಒತ್ತುವರಿ ತೆರವು, ಹೋರಾಟ ಆರಂಭಿಸಲಿದೆ ಜೆಡಿಎಸ್]
'ಬೆಂಗಳೂರಿನಲ್ಲಿ ಒಂದಿಂಚು ಭೂಮಿ ಖರೀದಿ ಮಾಡುವುದು ಕಷ್ಟ. ಮನೆ ಕಟ್ಟಿಕೊಳ್ಳಲು ಸಾಲ ಮಾಡಿ, ಒಡವೆ, ಅಡವಿಟ್ಟು ನಿವೇಶನ ಖರೀದಿಸಿರುತ್ತಾರೆ. ಅಲ್ಲಿ ಮನೆ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಮನೆಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳ ತಪ್ಪಿಗೆ ದಶಕಗಳಿಂದ ದುಡಿದ ಹಣ ಮತ್ತು ಮನೆಯೂ ಇಲ್ಲದೇ ಜನರ ಸಂಕಷ್ಟ ಪಡಬೇಕಾಗಿದೆ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮುನಿಸು ಮುಗಿದ ಅಧ್ಯಾಯ : ಕುಮಾರಸ್ವಾಮಿ ಅವರ ಜೊತೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಂತ್ರಸ್ತರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಅವರು, 'ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮುಗಿದ ಅಧ್ಯಾಯ. ಕೆಲವು ದಿನಗಳ ಹಿಂದೆ ನಮ್ಮ ನಡುವೆ ಉಂಟಾಗಿದ್ದ ವೈಮನಸ್ಸನ್ನು ದೇವೇಗೌಡರು ಮಾತುಕತೆ ಮೂಲಕ ಬಗೆಹರಿಸಿದ್ದಾರೆ' ಎಂದು ಸ್ಪಷ್ಟನೆ ನೀಡಿದರು.

ಸಂತ್ರಸ್ತರ ಅಹವಾಲು ಸ್ವೀಕರಿಸಿದ ಎಚ್‌ಡಿಕೆ
ಮಂಗಳವಾರ ಕೆರೆ ಒತ್ತುವರಿ ತೆರವುಗೊಳಿಸಿದ ಬಾಣಸವಾಡಿ, ಸಾರಕ್ಕಿ, ಜರಗನಹಳ್ಳಿ, ಇಟ್ಟುಮಡು ಮುಂತಾದ ಸ್ಥಳಗಳಿಗೆ ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಸಂತ್ರಸ್ತರ ಅಳಲನ್ನು ಆಲಿಸಿ, ನ್ಯಾಯ ಒದಗಿಸುವ ಭರವಸೆ ನೀಡಿದರು.

ಅಧಿಕಾರಿಗಳು ಏನು ಮಾಡುತ್ತಿದ್ದರು?
ಕೆರೆ ಜಾಗ ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿರುವುದು ಬಿಡಿಎ ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಡ ಹಾಗೂ ಮಧ್ಯಮ ವರ್ಗದ ಜನರು ಕೂಡಿಟ್ಟ ಹಣದಲ್ಲಿ ನಿರ್ಮಿಸಿಕೊಂಡ ಮನೆಗಳು ಇಂದು ಒಡೆಯಲಾಗುತ್ತಿದೆ. ನೇಪಾಳದಲ್ಲಿ ಪ್ರಕೃತಿ ವಿಕೋಪದಿಂದ ಜನ ಮನೆ ಕಳೆದುಕೊಂಡರೆ ಇಲ್ಲಿ ಸರ್ಕಾರವೇ ಮನೆ ಕೆಡವುತ್ತಿದೆ ಎಂದು ಆರೋಪಿಸಿದರು.

ಒತ್ತುವರಿ ತೆರವು ನಿಲ್ಲಿಸಿ : ಎಚ್ಢಿಕೆ
ಶಾಸಕ ಕೆ.ಬಿ.ಕೋಳಿವಾಡ ಅವರ ನೇತೃತ್ವದ ಸದನ ಸಮಿತಿ ಅಂತಿಮ ವರದಿ ನೀಡುವವರೆಗೂ ಕೆರೆ ಒತ್ತುವರಿ ತೆರವು ಮಾಡದಂತೆ ಮನವಿ ಮಾಡಿದ್ದೆ. ಆದರೆ, ಅದನ್ನು ಗಣನೆಗೆ ತೆಗೆದುಕೊಳ್ಳದೆ ತೆರವು ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇದರಲ್ಲಿ ರಾಜಕೀಯವಿಲ್ಲ
ಕೆರೆ ಒತ್ತುವರಿ ಕಾರ್ಯಾಚರಣೆ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ. ನೊಂದ ಜನರ ದುಃಖ ಆಲಿಸುವುದು ಅವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಆದ್ದರಿಂದ ಭೇಟಿ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

'ಬೆಂಗಳೂರು ಉಳಿಸಿ' ಸಂವಾದ
ಬೆಂಗಳೂರು ನಗರದ ಅಭಿವೃದ್ಧಿ ಹೇಗಿರಬೇಕು? ಎನ್ನುವ ಬಗ್ಗೆ ಮೇ 17ರ ಭಾನುವಾರ ಫ್ರೀಡಂ ಪಾರ್ಕ್‌ನಲ್ಲಿ ಸ್ವಾತಂತ್ರ್ಯ 'ಬೆಂಗಳೂರು ಉಳಿಸಿ' ಎಂಬ ಶೀರ್ಷಿಕೆಯಡಿ ಪಕ್ಷಾತೀತ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲು ಸಂವಾದ ಏರ್ಪಡಿಸಲಾಗಿದೆ.ಇದರಲ್ಲಿ ರಾಜಕಾರಣಿಗಳು, ಸಮಾಜದ ಗಣ್ಯರು ಸೇರಿದಂತೆ ಯಾರು ಬೇಕಾದರೂ ಸಂವಾದಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಬಹುದಾಗಿದೆ ಎಂದರು.

ತಾತ್ಕಾಲಿಕ ಶೆಡ್ ನಿರ್ಮಿಸಲು ಒತ್ತಾಯ
ಕೆರೆ ಸಂರಕ್ಷಣೆ ಮಾಡುವುದರೊಂದಿಗೆ ಕೆರೆ ಒತ್ತುವರಿ ತೆರವಿನಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಕೆಲಸ. ಆದ್ದರಿಂದ ಕೂಡಲೇ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ಮನೆ ಕಳೆದುಕೊಂಡವರಿಗೆ ಸಹಾಯ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.











Click it and Unblock the Notifications