ಡಿಕೆ ರವಿ ಕೇಸ್: ಸಿಐಡಿ ತನಿಖೆ ಎತ್ತ ಸಾಗಿದೆ?ಯಾರು ಟಾರ್ಗೆಟ್
ಬೆಂಗಳೂರು, ಮಾ.19: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಕಾರಣ ಹುಡುಕುತ್ತಿರುವ ಸಿಐಡಿ ತಂಡ ಹಗಲು ರಾತ್ರಿ ಎಡೆಬಿಡದೆ ತನಿಖೆ ತೀವ್ರಗೊಳಿಸಿದೆ. ಐಜಿಪಿ ಪ್ರಣಬ್ ಮೊಹಾಂತಿ ದಿಢೀರ್ ವರ್ಗಾವಣೆ ವಿವಾದದ ನಡುವೆ ಸಿಐಡಿ ತನಿಖೆ ಚುರುಕುಗೊಂಡಿದೆ.
ರವಿ ಅವರ ಸಾವಿನ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿರಿಗೌರಿ ಹಾಗೂ ಕುಮಾರಸ್ವಾಮಿ ಅವರನ್ನೊಳಗೊಂಡ 8 ಜನರ ತಂಡ ಮೊದಲಿಗೆ ಡಿಕೆ ರವಿ ಕುಟುಂಬ ವರ್ಗದಿಂದಲೇ ವಿಚಾರಣೆ ಆರಂಭಿಸಿದೆ. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ಸಾವಿನ ಸುದ್ದಿ ಸ್ಫೋಟಗೊಂಡ ಬಳಿಕ ಅವರ ಅಪಾರ್ಟ್ಮೆಂಟ್ ಗೆ ಬಂದ ಪೊಲೀಸರು ನೀಡಿದ ಹೇಳಿಕೆ ಏನು? ಅಪಾರ್ಟ್ಮೆಂಟ್ ಸಿಸಿಟಿವಿ ದೃಶ್ಯಾವಳಿ ವಿವರ ಏಕೆ ಬಹಿರಂಗ ಪಡಿಸಿಲ್ಲ? ಕೊನೆ ಬಾರಿ ಡಿಕೆ ರವಿಗೆ ಭೇಟಿ ಮಾಡಿದ ಮೂವರು ಆಗುಂತಕರು ಯಾರು? ಎರಡು ದಿನ ರವಿಗೆ ಕರೆ ಮಾಡಿದ ಆನಾಮಿಕ ವ್ಯಕ್ತಿ ಹಾಗೂ ಆ ಮಹಿಳೆ ಯಾರು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ. [ರವಿ ಪ್ರಕರಣ: ತನಿಖಾಧಿಕಾರಿ ಅಚ್ಚರಿ ವರ್ಗಾವಣೆ]

ತನಿಖೆ ಅಪ್ಡೇಟ್ಸ್ ಇಲ್ಲಿದೆ
* ಬೆಂಗಳೂರಿನ ಮಲ್ಲತ್ತಹಳ್ಳಿಯ ರವಿ ಅವರ ಮಾವ ಹನುಮಂತರಾಯಪ್ಪ ಅವರ ಮನೆಗೆ ತೆರಳಿ ಡಿಕೆ ರವಿ ಅವರ ಪತ್ನಿ ಕುಸುಮಾ ಹಾಗೂ ಕುಟುಂಬದ ಸದಸ್ಯರನ್ನು ವಿಚಾರಣೆ
* ರವಿ ಮಾವನ ಮನೆಯ ಸಿಸಿಟಿವಿ ವಶಕ್ಕೆ ಪಡೆದ ಸಿಐಡಿ ತಂಡ.
* ಕೋರಮಂಗಲದ ಸೇಂಟ್ ಜಾನ್‌ವುಡ್ ಅಪಾರ್ಟ್‌ಮೆಂಟ್‌ನ 903ನೇ ಸಂಖ್ಯೆಯ ಫ್ಲ್ಯಾಟ್, ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಗಳಿಗೂ ಭೇಟಿ ಪರಿಶೀಲನೆ.
* ರವಿ ಅವರ ಕಾರು ಚಾಲಕ, ಕಚೇರಿ ಸಹಾಯಕ, ಆಪ್ತ ಸಹಾಯಕ ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿ ಹೇಳಿಕೆ ಪಡೆಯಲಾಗಿದೆ.

ಸೈಬರ್ ಕ್ರೈಂ ವಿಭಾಗದ ಬಳಿ ರವಿ ಗಾಡ್ಜೆಟ್ಸ್
* ರವಿ ಅವರ ಸಾವು ಸಂಭವಿಸುವ ಮುನ್ನ ಎರಡು ದಿನಗಳಿಂದ ಅವರ ಮೊಬೈಲ್‌ಗೆ ಬಂದಿರುವ ಕರೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
* ರವಿ ಅವರ ವಾಟ್ಸಪ್ ಹಾಗೂ ಇ-ಮೇಲ್ ಸಂದೇಶಗಳ ಕುರಿತು ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎರಡು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಐಪ್ಯಾಡ್ ಹಾಗೂ ವಾಟ್ಸಪ್ ಪಾಸ್ ವರ್ಡ್ ಬ್ರೇಕ್ ಮಾಡಿ ಸಂದೇಶ, ಇಮೇಲ್ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ಐಎಎಸ್ ಅಧಿಕಾರಿಗಳ ವಿಚಾರಣೆ
* ಡಿಕೆ ರವಿ ಅವರು ಕೊನೆಯ ಬಾರಿಗೆ ಕರೆ ಮಾಡಿದ್ದರು ಎನ್ನಲಾದ ಮಹಿಳಾ ಐಎಎಸ್ ಅಧಿಕಾರಿ ಸೇರಿದಂತೆ ನಾಲ್ಕಾರು ಅಧಿಕಾರಿಗಳನ್ನು ಸೌಮೇಂದು ಮುಖರ್ಜಿ ಅವರ ತಂಡ ವಿಚಾರಣೆ ನಡೆಸಿದೆ.
* ಕೊನೆ ಬಾರಿಗೆ ಕರೆ ಮಾಡಿದ ರವಿ ಅವರು ಏನಾದರೂ ಮಾಹಿತಿ ನೀಡಿದ್ದರೆ, ಸಾವಿನ ಸುಳಿವು ಸಿಕ್ಕಿತ್ತೇ, ಯಾರದಾದರೂ ಬೆದರಿಕೆ ವಿಷ್ಯ ತಿಳಿಸಿದ್ದರೆ ಎಂಬ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ಡಿಐಜಿ ಸೌಮೇಂದು ಮುಖರ್ಜಿ ಹೇಳಿದ್ದಾರೆ.

ಮಹಿಳಾ ಅಧಿಕಾರಿ ಹೆಸರು ಬಹಿರಂಗ ಪಡಿಸುವಂತಿಲ್ಲ
* ಮಹಿಳಾ ಅಧಿಕಾರಿ ಜೊತೆ ಡಿಕೆ ರವಿ ಅವರಿಗೆ ಆಪ್ತ ಒಡನಾಟವಿತ್ತು. ಇಬ್ಬರ ನಡುವೆ ಬೇರೆ ಏನೋ ಸಂಬಂಧವಿತ್ತು ಎಂಬ ಸುದ್ದಿಗಳನ್ನು ಈ ಪ್ರಕರಣದ ಹೊರಕ್ಕೆ ಇಡಲಾಗಿದೆ.ಸಾವಿನ ಕಾರಣ ಹುಡುಕಾಟಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಸಿಐಡಿ ಕಲೆ ಹಾಕುತ್ತಿದೆ.
* ತನಿಖೆಯ ದೃಷ್ಟಿಯಿಂದ ಮಹಿಳಾ ಅಧಿಕಾರಿ ಹೆಸರು ಬಹಿರಂಗ ಪಡಿಸುವಂತಿಲ್ಲ. ಹಾಗೂ ಇಬ್ಬರ ನಡುವಿನ ಸಂಭಾಷಣೆ ವಿವರಗಳು ಈಗಾಗಲೇ ಪೊಲೀಸ್ ವಶದಲ್ಲಿರುವುದರಿಂದ ಯಾವುದೇ ಊಹಾಪೋಹದ ಬಗ್ಗೆ ತನಿಖಾ ತಂಡ ಗಮನ ಹರಿಸಿಲ್ಲ.
* ಕೌಟುಂಬಿಕ ಕಲಹದ ಸಂದೇಹದ ಬಗ್ಗೆ ತನಿಖೆ ನಡೆಸಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.

ವೈದ್ಯಕೀಯ ವರದಿಗಾಗಿ ಇನ್ನೂ ಕಾಯಬೇಕಿದೆ
* ಪ್ರಾಥಮಿಕ ಹಂತದ ವರದಿ ಪ್ರಕಾರ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಇನ್ನೂ ಅಟಾಪ್ಸಿ ವರದಿ, ಎಫ್ ಎಸ್ ಎಲ್ ವರದಿ ಬರಬೇಕಿದೆ.
* ಪೂರ್ಣ ಪ್ರಮಾಣದ ಮರಣೋತ್ತರ ಪರೀಕ್ಷೆ ವರದಿ ಸೋಮವಾರ ಅಥವಾ ಮುಂದಿನ ಬುಧವಾರದೊಳಗೆ ಲಭ್ಯ.
* ಸಿಐಡಿ ತಂಡ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸುತ್ತಿದೆ.
* ಸಂಪೂರ್ಣವಾಗಿ ವರದಿ ಬಂದ ಮೇಲೆ ಸಾವಿನ ಕಾರಣದ ಬಗ್ಗೆ ಸ್ಪಷ್ಟತೆ ಮೂಡಲಿದೆ. ವಿಷ ಪ್ರಾಶನ ಅಥವಾ ಬಲವಂತವಾಗಿ ಆತ್ಮಹತ್ಯೆಗೆ ದೂಡಿದ್ದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ.












Click it and Unblock the Notifications