ಗೃಹಜ್ಯೋತಿ ಯೋಜನೆ; ಬೆಸ್ಕಾಂ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಬೆಂಗಳೂರು, ಜೂನ್ 15; ಕರ್ನಾಟಕ ಸರ್ಕಾರ 'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಜೂನ್ 18 ರಿಂದ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀಡಿದ 5 ಗ್ಯಾರಂಟಿಗಳಲ್ಲಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆಯೂ ಒಂದು.
ಇಂಧನ ಇಲಾಖೆ ಈಗಾಗಲೇ 'ಗೃಹಜ್ಯೋತಿ' ಯೋಜನೆಯಡಿ ಫಲಾನುಭವಿಗಳ ನೋಂದಣಿಯನ್ನು ಜೂನ್ ತಿಂಗಳ 18ರಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ. ಯೋಜನೆಯ ಫಲಾನುಭವಿಗಳಾಗಲು ಆಧಾರ್ ಕಾರ್ಡ್, ಗ್ರಾಹಕರ IDಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ.

ಜನರು ಜೂನ್ 18ರಿಂದ ಅರ್ಜಿಗಳನ್ನು ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಸಲ್ಲಿಕೆ ಮಾಡಲು ಅವಕಾಶವಿದೆ. ಈ ಯೋಜನೆ 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.
ಬೆಸ್ಕಾಂನಲ್ಲಿ ಬಿಲ್ ಪಾವತಿ ಹೇಗೆ?; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತನ್ನ ಕಚೇರಿಗಳಲ್ಲಿ ಸಹ 'ಗೃಹಜ್ಯೋತಿ' ಯೋಜನೆಯ ಅರ್ಜಿಗಳನ್ನು ಸ್ವೀಕಾರ ಮಾಡಲಿದೆ. ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಬೆವಿಕಂ ಕಛೇರಿಗಳಲ್ಲಿ ಸ್ವೀಕರಿಸುವ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
'ಗೃಹಜ್ಯೋತಿ' ಯೋಜನೆ ಅಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಾಗೂ ಅಲ್ಪಕಾಲಾವಧಿಯಲ್ಲಿಯೇ ಬಹುತೇಕ ಅರ್ಜಿಗಳು ಸಲ್ಲಕೆಯಾಗುವ ಕಾರಣದಿಂದ ತಮ್ಮ ವಲಯ ವ್ಯಾಪ್ತಿಯ ಕಛೇರಿಗಳಲ್ಲಿ ಈ ಕೆಳಕಂಡಂತೆ ವಿಶೇಷ ಕೌಂಟರ್‌ಗಳನ್ನು ತೆರಯಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಲಯ ಕಚೇರಿಯಲ್ಲಿ 2, ವೃತ್ತ ಕಚೇರಿಯಲ್ಲಿ 2, ವಿಭಾಗ ಕಚೇರಿಯಲ್ಲಿ 2, ಉಪ ವಿಭಾಗದಲ್ಲಿ 2 ಮತ್ತು ಶಾಖೆಯಲ್ಲಿ 1 ವಿಶೇಷ ಕೌಂಟರ್ ತೆರೆಯಲಾಗುತ್ತದೆ. ಪ್ರತಿ ಕೌಂಟರ್‌ಗಳಗೆ ಇಬ್ಬರು ಸಿಬ್ಬಂದಿಯಂತೆ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ, ಗ್ರೂಪ್-ಡಿ (ಕಂಪ್ಯೂಟರ್ ಜ್ಞಾನವುಳ್ಳ) ಸಿಬ್ಬಂದಿಗಳನ್ನು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್/ FTNC ರವರುಗಳನ್ನು ಸಹ ನಿಯೋಜಿಸಲು ಸೂಚಿಸಲಾಗಿದೆ.
ಎಲ್ಲಾ ಕಚೇರಿ ಕೌಂಟರ್‌ಗಳಲ್ಲಿ 'ಗೃಹಜ್ಯೋತಿ' ಕೌಂಟರ್ ಎಂಬ ಹೆಸರಿನ ಫಲಕ ಆಳವಡಿಸಬೇಕು. ಯೋಜನೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಗಿಯುವ ತನಕ ಈ ಕೌಂಟರ್ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಪ್ರಧಾನ ವ್ಯವಸ್ಥಾಪಕರು (ಆ ಮತ್ತುಮಾ. ಸಂ) ಬೆ. ವಿ. ಕಂ. ಬೆಂಗಳೂರು ಸಿ. ಎನ್. ಮಂಜುನಾಥ ನಿರ್ದೇಶನ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ಅರ್ಜಿ; 'ಗೃಹಜ್ಯೋತಿ' ಯೋಜನೆಯ ಲಾಭ ಪಡೆಯಲು ಬಯಸುವ ಜನರು ಸೇವಾ ಸಿಂಧು ರ್ಪೋಟಲ್‌ನಲ್ಲಿ (https://sevasindhugs.karnataka.gov.in) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸದರಿ ವೆಬ್‌ಸೈಟ್ ಮೊಬೈಲ್ ಫೋನ್/ ಡೆಸ್ಕ್‌ಟಾಪ್/ ಲ್ಯಾಪ್ ಟ್ಯಾಪ್‌ಗಳಲ್ಲಿಯೂ ಕೆಲಸ ಮಾಡಲಿದೆ.
ಯೋಜನೆಯಡಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ. ಯೋಜನೆಯಿಂದ ರಾಜ್ಯದ 2 ಕೋಟಿ ಗೃಹ ಬಳಕೆ ಗ್ರಾಹಕರಿಗೆ ಅನುಕೂಲವಾಗುತ್ತದೆ.
ಈ ಯೋಜನೆಯು 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಯೋಜನೆಗೆ ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿ (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೀಡಿ ನೋಂದಣಿ ಮಾಡಿಸಬೇಕು.












Click it and Unblock the Notifications