ಬೆಂಗಳೂರು; ಬಡಿದಾಡಿಕೊಂಡ ಮನೆ ಮಾಲೀಕ, ಬಾಡಿಗೆದಾರ!
ಬೆಂಗಳೂರು, ನವೆಂಬರ್ 09: ಮನೆ ಮಾಲೀಕ ಮತ್ತು ಬಾಡಿಗೆದಾರ ಬಡಿದಾಡಿಕೊಂಡ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಿದ್ದು, ಪ್ರಕರಣ ಈಗ ಆರ್. ಟಿ. ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೆಚ್. ಎಂ. ಟಿ. ಲೇಔಟ್‌ನಲ್ಲಿ ಸೋಮವಾರ ಮನೆ ಮಾಲೀಕ ಮೊಹಮದ್ ಇಲಿಯಾಸ್ ಮತ್ತು ಬಾಡಿಗೆದಾರ ಮೊಹಮ್ಮದ್ ನಾದ್ವಿ ನಡುವೆ ಜಗಳ ನಡೆದಿದೆ. ಮನೆ ಬಾಡಿಗೆ ಕೊಡುವ ವಿಚಾರ, ಖಾಲಿ ಮಾಡುವ ವಿಚಾರದಲ್ಲಿ ಇಬ್ಬರು ಬಡಿದಾಡಿಕೊಂಡಿದ್ದಾರೆ.
ಮೊಹಮದ್ ಇಲಿಯಾಸ್ ಮನೆಯಲ್ಲಿ ಮೊಹಮ್ಮದ್ ನಾದ್ವಿ ನಾಲ್ಕು ವರ್ಷಗಳಿಂದ ಬಾಡಿಗೆಗೆ ಇದ್ದಾರೆ. ಕೋವಿಡ್ ಲಾಕ್ ಡೌನ್ ಪರಿಣಾಮ ಮೊಹಮ್ಮದ್ ನಾದ್ವಿ ಕೆಲಸಕ್ಕೆ ಹೋಗಲಾಗದೆ ಬಾಡಿಗೆ ಕಟ್ಟಿರಲಿಲ್ಲ. ಆದರೆ ಇಲಿಯಾಸ್ ಬಾಡಿಗೆ ಕೊಡುವಂತೆ ಪೀಡಿಸುತ್ತಿದ್ದ.

ಬಾಡಿಗೆ ಕೊಡು ಇಲ್ಲವೇ ಮನೆ ಖಾಲಿ ಮಾಡು ಎಂದು ಮೊಹಮದ್ ಇಲಿಯಾಸ್ ಗಲಾಟೆ ಮಾಡಿದ್ದಾನೆ. ಆಗ ಇಬ್ಬರ ನಡುವೆ ಜಗಳ ನಡೆದಿದೆ. ಮೊಹಮ್ಮದ್ ನಾದ್ವಿ ಕೋರ್ಟ್‌ಗೆ ಹೋಗುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆಗ ಇಲಿಯಾಸ್ ಹಲ್ಲೆ ಮಾಡಿದ್ದಾನೆ.
ಮೊಹಮ್ಮದ್ ನಾದ್ವಿ ಮತ್ತು ಇಲಿಯಾಸ್ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸ್ಥಳೀಯರು ಈ ಕುರಿತು ಆರ್. ಟಿ. ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋದರು.
ಮೊಹಮ್ಮದ್ ನಾದ್ವಿ ಮತ್ತು ಇಲಿಯಾಸ್ ದೂರು ನೀಡಿದ್ದು, ಆರ್. ಟಿ. ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಠಾಣೆಯಲ್ಲಿಯೇ ಇಬ್ಬರ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಕೋವಿಡ್ ಲಾಕ್ ಡೌನ್ ಬಳಿಕ ಬೆಂಗಳೂರು ನಗರದಲ್ಲಿ ನೂರಾರು ಮನೆಗಳು ಖಾಲಿ ಇವೆ. ಲಾಕ್ ಡೌನ್ ಬಳಿಕ ಆರ್ಥಿಕ ಸಂಕಷ್ಟ ಉಂಟಾದ ಕಾರಣ ಜನರು ಸಹ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ.












Click it and Unblock the Notifications