ಬೆಂಗಳೂರು-ಹೊಸೂರು ಮೆಟ್ರೋ ಸಂಪರ್ಕ; ಸರ್ಕಾರದ ನಿಲುವೇನು?
ಬೆಂಗಳೂರು, ಆಗಸ್ಟ್ 17: ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಈಗ ಬಹು ಚರ್ಚಿತ ವಿಚಾರವಾಗಿದೆ. ಬೆಂಗಳೂರು ಮತ್ತು ಹೊಸೂರು ಸಂಪರ್ಕಿಸುವ ಈ ರೈಲು ಯೋಜನೆಯನ್ನು ಹಲವರು ವಿರೋಧಿಸುತ್ತಿದ್ದಾರೆ. ಯೋಜನೆ ಬಗ್ಗೆ ರಾಜ್ಯ ಸರ್ಕಾರದ ಅಭಿಪ್ರಾಯವೇನು? ಎಂಬುದು ಎಲ್ಲರ ಪ್ರಶ್ನೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಬಗ್ಗೆ ಮಾತನಾಡಿದ್ದಾರೆ. "ನಾವು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯನ್ನು ವಿರೋಧಿಸುತ್ತಿಲ್ಲ. ಆದರೆ ನಮ್ಮ ರಾಜ್ಯದ ಹಿತವನ್ನು ನಾವು ಮೊದಲು ನೋಡಬೇಕು" ಎಂದು ಹೇಳಿದ್ದಾರೆ.

The Indian Express ಜೊತೆ ಸಚಿವರು ಮಾತನಾಡಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ಸಂಪರ್ಕಿಸುವ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಚಿವರು ಹೇಳಿದ್ದೇನು?; ಸಚಿವ ಪ್ರಿಯಾಂಕ್ ಖರ್ಗೆ, "ಕರ್ನಾಟಕದ ಕೈಗಾರಿಕೆಗಳು, ವಾಣಿಜ್ಯೋದ್ಯಮವನ್ನು ರಕ್ಷಣೆ ಮಾಡುವ ಸಲುವಾಗಿ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಕುರಿತು ಸರ್ಕಾರ ಅಷ್ಟು ಆಸಕ್ತಿ ಹೊಂದಿಲ್ಲ" ಎಂದು ತಿಳಿಸಿದ್ದಾರೆ.
ಹೊಸೂರಿನಲ್ಲಿನ ಭೂಮಿಯ ಬೆಲೆ ಕಡಿಮೆ ಇರುವುದು, ಕಡಿಮೆ ಜೀವನ ನಿರ್ವಹಣೆ ಖರ್ಚು, ಹೊಸದಾಗಿ ಬೆಳೆಯುತ್ತಿರುವ ಉದ್ಯಮಗಳಿಂದಾಗಿ ಮೆಟ್ರೋ ಸಂಪರ್ಕ ಸಾಧ್ಯವಾದರೆ ಸಣ್ಣ, ಅತಿ ಸಣ್ಣ ಉದ್ಯಮಗಳು, ಸ್ಟಾರ್ಟ್ ಅಪ್‌ಗಳು ಎಲೆಕ್ಟ್ರಾನಿಕ್ ಸಿಟಿಯಿಂದಾಗಿ ಹೊಸೂರು ಕಡೆ ಸಾಗಬಹುದು ಎಂಬ ಆತಂಕವಿದೆ.
ತಮಿಳುನಾಡಿನ ಚೆನ್ನೈ ಮೆಟ್ರೋ ರೈಲು ಕಾರ್ಪೊರೇಷನ್ ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಜಾರಿಗೆ ಉತ್ಸುಕವಾಗಿದೆ. ಯೋಜನೆ ಬಗ್ಗೆ ಕಾರ್ಯ ಸಿದ್ಧತಾ ವರದಿಯನ್ನು ತಯಾರು ಮಾಡಲು ಟೆಂಡರ್ ಕರೆಯುವ ಹಂತಕ್ಕೆ ಅದು ಬಂದಿದೆ. ಆದರೆ ಕರ್ನಾಟಕ ಯೋಜನೆ ಬಗ್ಗೆ ಅಷ್ಟು ಆಸಕ್ತಿ ತೋರಿಸಿಲ್ಲ.
ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಬೆಂಗಳೂರು ನಗರದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸಲಿದೆ ಎಂಬುದು ಸದ್ಯದ ಅಂದಾಜು. ನಗರದಲ್ಲಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆ ಜಾರಿಗೊಳಿಸುತ್ತಿದೆ. ಬೊಮ್ಮಸಂದ್ರ ಯೋಜನೆಯ 2ನೇ ಹಂತದ ಹಳದಿ ಮಾರ್ಗಕ್ಕೆ ಸೇರುತ್ತದೆ.
ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಮಾತ್ರವಲ್ಲ, ಮತ್ತೊಂದು ಕಡೆ ಕೆ-ರೈಡ್ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಹೊಸೂರು ತನಕ ವಿಸ್ತರಣೆ ಮಾಡುವ ಪ್ರಸ್ತಾಪ ಮುಂದಿಟ್ಟಿದೆ.
"ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಬಳಿಕ ಕರ್ನಾಟಕದ ಹೂಡಿಕೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯದ ಹೂಡಿಕೆ ಮತ್ತು ಮಾನವ ಸಂಪನ್ಮೂಲ ನಮ್ಮ ಬಹುದೊಡ್ಡ ಶಕ್ತಿಯಾಗಿದೆ. ಅದನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಯೋಜನೆ ಕುರಿತು ಮಾತನಾಡಿನದ ಹೆಸರು ಕೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು. ಅಂತರರಾಜ್ಯ ಮೆಟ್ರೋ ರೈಲು ಯೋಜನೆ ಕರ್ನಾಟಕ ಸರ್ಕಾರದ ಪರವಾಗಿಲ್ಲ. ಗಡಿಭಾಗದ ಈ ಯೋಜನೆಯಿಂದಾಗಿ ಕರ್ನಾಟಕ ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಉದ್ಯೋಗವನ್ನು ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೊಮ್ಮಸಂದ್ರ-ಹೊಸೂರು ಮೆಟ್ರೋ ಯೋಜನೆಯು ಸುಮಾರು 20.5 ಕಿ. ಮೀ. ಎಂದು ಅಂದಾಜಿಸಲಾಗಿದೆ. ಇದರಲ್ಲಿ 11.7 ಕಿ. ಮೀ. ಕರ್ನಾಟಕದಲ್ಲಿ ಮತ್ತು 8.8 ಕಿ. ಮೀ. ತಮಿಳುನಾಡಿನಲ್ಲಿ ಸಾಗಲಿದೆ.
ಸುಮಾರು 5 ಲಕ್ಷ ಜನಸಂಖ್ಯೆ ಹೊಂದಿರುವ ಹೊಸೂರಿನಲ್ಲಿ ಹಲವು ಉದ್ಯಮಗಳಿವೆ. ಇವುಗಳಲ್ಲಿ ಸಣ್ಣ ಕೈಗಾರಿಕೆಗಳು ಸೇರಿದಂತೆ ಅಶೋಕ್ ಲೈಲ್ಯಾಂಡ್, ಟಿವಿಎಸ್, ಟೈಟಾನ್ ನಂತಹ ಬಹುದೊಡ್ಡ ಕಂಪನಿಗಳು ಸಹ ಸೇರಿವೆ. ಬೆಂಗಳೂರು ಮೂಲದ ಓಲಾ ಹೊಸೂರಿನಿಂದ 90 ಕಿ. ಮೀ. ದೂರದ ಕೃಷ್ಣಗಿರಿಯಲ್ಲಿ 500 ಎಕರೆ ಪ್ರದೇಶದಲ್ಲಿ ಓಲಾ ಫ್ಯೂಚರ್ ಫ್ಯಾಕ್ಟರಿ ಘಟಕ ನಿರ್ಮಾಣ ಮಾಡಿದೆ.
ಕರ್ನಾಟಕದ ಹಲವು ಕನ್ನಡ ಪರ ಸಂಘಟನೆಗಳು ಸಹ ಅಂತರರಾಜ್ಯ ಮೆಟ್ರೋ ರೈಲು ಯೋಜನೆಯನ್ನು ವಿರೋಧಿಸುತ್ತಿವೆ. ಯೋಜನೆ ಜಾರಿಯಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, "ಹಾಗೆ ನೋಡಿದರೆ ಹೊಸೂರು ಕರ್ನಾಟಕದ ಭಾಗವಾಗಿದೆ. ಹೊಸೂರು ಕರ್ನಾಟಕಕ್ಕೆ ಸೇರಬೇಕು ಎಂದು ಅಲ್ಲಿನ ಪುರಸಭೆಯ ಮುಂದೆ ಸಹ ಹೋರಾಟ ಮಾಡಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಹೊಸೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications