ಸಂತೋಷ್ ಲಾಡ್ ರಾಜೀನಾಮೆ ರಾಜಭವನದ ಅಂಗಳಕ್ಕೆ!

ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿರೇಮಠ್ ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದರು. ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ 126 ಪುಟಗಳ ದಾಖಲೆಗಳನ್ನು ನೀಡಿ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಸೂಚಿಸಬೇಕು ಎಂದು ಮನವಿ ಮಾಡಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯಪಾಲರು ಹಿರೇಮಠ್ ಅವರ ಬಳಿ ಮಾತುಕತೆ ನಡೆಸಿದ್ದು, ದಾಖಲೆಗಳನ್ನು ಪಡೆದಿದ್ದಾರೆ. ಹಿರೇಮಠ್ ದಾಖಲೆಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಸಂತೋಷ್ ಲಾಡ್ ಅವರ ಕಚೇರಿಗೂ ತಲುಪಿಸಿದ್ದಾರೆ.
ರಾಜ್ಯಪಾಲರು ಎಲ್ಲಾ ದಾಖಲೆಗಳನ್ನು ಪಡೆದಿದ್ದು, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿ, ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸೂಚಿಸಬೇಕೆಂದು ಅವರಿಗೆ ಮನವಿ ಸಲ್ಲಿಸಿದ್ದೇನೆ. ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹಿರೇಮಠ್ ಹೇಳಿದ್ದಾರೆ.
ದಾಖಲೆಯಲ್ಲಿ ಏನಿದೆ : ರಾಜ್ಯಪಾಲರಿಗೆ ಹಿರೇಮಠ್ ನೀಡಿರುವ ದಾಖಲೆಯಲ್ಲಿ ಸಂತೋಷ್ ಲಾಡ್ ಪಾಲುದಾರಿಕೆಯ ವಿ.ಎಸ್.ಲಾಡ್ ಅಂಡ್ ಸನ್ಸ್ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಸುಪ್ರೀಂಕೋರ್ಟ್ ತನ್ನ ತೀರ್ಪು, ಲಾಡ್ ವಿರುದ್ಧ ನಡೆಯುತ್ತಿರುವ ಅರಣ್ಯಾಧಿಕಾರಿಗಳ ತನಿಖೆ, ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ದಾಖಲೆಳಿವೆ.
ಹಿರೇಮಠ್ ಆರೋಪ ಸುಳ್ಳು : ಎಸ್.ಆರ್.ಹಿರೇಮಠ್ ಆರೋಪವನ್ನು ಸಚಿವ ಸಂತೋಷ್ ಲಾಡ್ ತಳ್ಳಿಹಾಕಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ವಿ.ಎಸ್.ಲಾಡ್ ಅಂಡ್ ಸನ್ಸ್ ಕಂಪನಿ ಪರವಾನಿಗೆ ಮೀರಿ ಗಣಿಗಾರಿಕೆ ನಡೆಸಿದೆ. ಜಪ್ತಿ ಮಾಡಲಾಗಿದ್ದ ಅದಿರನ್ನು ಸಂಗ್ರಹಿಸಿದೆ ಎಂದು ಆರೋಪಿಸಿದ್ದಾರೆ. ಇವು ಸುಳ್ಳು ದಾಖಲೆಗಳು ಎಂದು ಹೇಳಿದ್ದಾರೆ.
ಬುಧವಾರ ಬಿಜೆಪಿ ಪ್ರತಿಭಟನೆ : ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಬಿಜೆಪಿ ಬುಧವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಫ್ರೀಡಂ ಪಾರ್ಕ್ ನಿಂದ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು ಸಿಎಂ ಮನೆಎ ಮುತ್ತಿಗೆ ಹಾಕಲಿದ್ದಾರೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. (ಸಂತೋಷ್ ಲಾಡ್ ವಿರುದ್ಧ ಅಖಾಡಕ್ಕಿಳಿದ ಬಿಜೆಪಿ)












Click it and Unblock the Notifications