ಬಿಬಿಎಂಪಿ ಚುನಾವಣೆ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಏ. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಏ.24ರಂದು ಕೋರ್ಟ್ ತೀರ್ಪನ್ನು ಪ್ರಕಟಿಸಲಿದ್ದು ಚುನಾವಣೆ ನಡೆಯಲಿದೆಯೇ, ಇಲ್ಲವೇ? ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಮತ್ತು ರಾಮ್ ಮೋಹನ್ ರೆಡ್ಡಿ ಅವರ ವಿಭಾಗೀಯ ಪೀಠ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ. [ಪಾಲಿಕೆ ಚುನಾವಣೆ ಘೋಷಣೆಗೆ ತಡೆಯಾಜ್ಞೆ]
ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಸದ್ಯ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಲಾಗಿದೆ. 6 ತಿಂಗಳಿನಲ್ಲಿ ಚುನಾವಣೆ ನಡೆಸುತ್ತೇವೆ. ಆದ್ದರಿಂದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು. [ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆಯಲ್ಲೇನಿದೆ?]
ಹೈಕೋರ್ಟ್ ಆದೇಶ ಸರ್ಕಾರಕ್ಕೆ ಸ್ಪಲ್ಪ ಸಮಾಧಾನ ತಂದಿದೆ. ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಒಪ್ಪಿಗೆ ಪಡೆಯಲು ಸರ್ಕಾರ ಗುರುವಾರ ವಿಶೇಷ ವಿಧಾನಸಭೆ ಅಧಿವೇಶನ ಕರೆದಿದೆ. ಸೋಮವಾರ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಗೊಂಡಿದೆ. ವಿಧಾನಪರಿಷತ್ತಿನಲ್ಲಿ ಗುರುವಾರ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.

ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕೋರ್ಟ್
ಬುಧವಾರ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಸರ್ಕಾರದ ವಿರುದ್ಧ ಅಸಮಾಧನ ವ್ಯಕ್ತಪಡಿಸಿತು. ಪಾಲಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತೀರಿ. ನೀವು ಅಧಿಕಾರಕ್ಕೆ ಬಂದು ಎರಡು ವರ್ಷವಾಯಿತು. ಆಯುಕ್ತರು ನಿಮ್ಮವರೇ, ಆಗ ನೀವು ಕೈಕಟ್ಟಿ ಕುಳಿತುಕೊಂಡಿದ್ದಿರೆ? ಎಂದು ಪ್ರಶ್ನೆ ಮಾಡಿತು.

ಚುನಾವಣೆ ಮುಂದೂಡುವ ಹುನ್ನಾರವಲ್ಲವೇ
ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿದ ಸರ್ಕಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಪಾಲಿಕೆ ಸದಸ್ಯರ ಆಡಳಿತಾವಧಿ ಎರಡು ದಿನವಿದೆ ಎನ್ನುವಾಗ ಸೂಪರ್ ಸೀಡ್ ಮಾಡಿ ಚುನಾವಣೆಯನ್ನು ಮುಂದೂಡಲು ತಂತ್ರ ರೂಪಿಸಿದ್ದೀರಿ ಅಲ್ಲವೇ? ಎಂದು ಕೋರ್ಟ್ ಪ್ರಶ್ನಿಸಿತು.

ಏ.24ರಂದು ತೀರ್ಪು ಪ್ರಕಟ
ಸರ್ಕಾರ, ಚುನಾವಣಾ ಆಯೋಗ, ಬಿಬಿಎಂಪಿ ಸದಸ್ಯರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಎಲ್ಲಾ ಕಡೆಯ ವಾದಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತು. ಏ.24ರಂದು ತೀರ್ಪು ಪ್ರಕಟಗೊಳ್ಳಲಿದೆ.

ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿ
ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ನೀಡಿತ್ತು. ಆದರೆ, ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಭಜಿಸಲು ಸಿದ್ಧವಾಗಿರುವ ಸರ್ಕಾರ ಚುನಾವಣೆಯನ್ನು ಮುಂದೂಡಲು ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು.

ಸರ್ಕಾರಕ್ಕೆ ಸ್ಪಲ್ಪ ಸಮಾಧಾನ
ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿರುವುದು ಸರ್ಕಾರಕ್ಕೆ ಸ್ಪಲ್ಪ ಸಮಾಧಾನ ತಂದಿದೆ. ಸೋಮವಾರ ನಡೆದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆ ಮಾಡಲು 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ವಿಧಾನಪರಿಷತ್ತಿನಲ್ಲಿ ಅಂಗೀಕಾರ ಬೇಕಾಗಿದ್ದು, ಅದಕ್ಕಾಗಿ ಗುರುವಾರ ವಿಶೇಷ ಅಧಿವೇಶನ ನಡೆಯಲಿದೆ.

ಪರಿಷತ್ತಿನಲ್ಲಿ ಹಿನ್ನಡೆ ಉಂಟಾದರೆ?
ಗುರುವಾರ ವಿಧಾನಪರಿಷತ್ ಕಲಾಪದಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆ ಕಡಿಮೆ ಇದೆ. ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಕಡಿಮೆ ಇದ್ದಾರೆ. ಒಂದು ವೇಳೆ ಅಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆಯದಿದ್ದರೆ ಮತ್ತೊಮ್ಮೆ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದು ರಾಜ್ಯಪಾಲರಿಗೆ ಸಲ್ಲಿಸಲಿದೆ.












Click it and Unblock the Notifications