IMA ಹಗರಣ: ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧದ ಸಿಬಿಐ ಪ್ರಕರಣ ರದ್ದು
ಬೆಂಗಳೂರು, ಜುಲೈ, 29: ಬಹುಕೋಟಿ ರೂಪಾಯಿಗಳ ಐಎಂಎ ಹಗರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ದಾಖಲಾಗಿದ್ದ ಸಿಬಿಐ ಪ್ರಕರಣವನ್ನು ಕರ್ನಾಟಕ ಹೈ ಕೋರ್ಟ್‌ರದ್ದುಗೊಳಿಸಿದೆ. ಈ ಮೂಲಕ ಅಜಯ್ ಹಿಲೋರಿಗೆ ಅತಿ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಅಜಯ್ ಹಿಲೋರಿ ಅವರ ವಿರುದ್ಧ ಸಿಬಿಐ ಹೂಡಿದ್ದ ಪ್ರಕರಣವನ್ನು ನ್ಯಾಯಾಲಯವು ಶುಕ್ರವಾರ ರದ್ದುಪಡಿಸಿ ಆದೇಶ ನೀಡಿದೆ. ಪ್ರಕರಣ ರದ್ದು ಕೋರಿ ಅಜಯ್ ಹಿಲೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.

"ಅರ್ಜಿದಾರರನ್ನು ಈಗಾಗಲೇ ಇಲಾಖಾ ವಿಚಾರಣೆಯಲ್ಲಿ ದೋಷ ಮುಕ್ತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಪ್ರಕರಣ ರದ್ದುಗೊಳಿಸಲಾಗುತ್ತಿದೆ" ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ತೀರ್ಪಿನ ಪೂರ್ಣಪ್ರತಿ ಇನ್ನೂ ಲಭ್ಯವಾಗಿಲ್ಲ. ಅರ್ಜಿದಾರರು 2020ರ ಸೆಪ್ಟೆಂಬರ್ 9ರಂದು ತಮ್ಮ ವಿರುದ್ಧ ವಿಚಾರಣೆಗೆ ಸರ್ಕಾರ ಪೂರ್ವಾನುಮತಿ ನೀಡಿದ್ದನ್ನು ಮತ್ತು 2020ರ ಜನವರಿ 7ರಂದು ಸಿಬಿಐ ತನಿಖೆಗೆ ಅನುಮತಿ ನೀಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಪ್ರಕರಣದ ಹಿನ್ನೆಲೆ
ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ 2017ರ ಮೇ 16ರಂದು ಐಎಂಎ ಪ್ರಕರಣದ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಅದರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಡೆಸಿರುವ ತನಿಖೆಯ ವರದಿಯನ್ನು ಆಧರಿಸಿ ಐಎಂಎ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅವರು ಶಿಫಾರಸು ಮಾಡಿದ್ದರು.
ಐಎಂಎ ನಿಯಮದ ಪ್ರಕಾರ ವ್ಯಾಪಾರ ವಹಿವಾಟು ನಡೆಸಿದೆ ಮತ್ತು ಈ ವಿಚಾರದಲ್ಲಿಆಯುಕ್ತರೇ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದೆಂದು ಹೇಳಿದ್ದರೆಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿತ್ತು. ಅದನ್ನು ಆಧರಿಸಿ ಸಿಬಿಐ ಅಜಯ್ ಹಿಲೋರಿ ಅವರ ಹೆಸರನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸೇರಿಸಿ, ಐಪಿಸಿ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಆರೋಪವನ್ನು ಹೊರಿಸಿತ್ತು.












Click it and Unblock the Notifications