ಸಾಧು ಕೋಕಿಲ ಅತ್ಯಾಚಾರ ಆರೋಪ ಪ್ರಕರಣ: ರಾಜ್ಯ ಸರ್ಕಾರಕ್ಕೆ ನೋಟಿಸ್
Recommended Video
ಬೆಂಗಳೂರು, ಅಕ್ಟೋಬರ್ 23: ಸಂಗೀತ ನಿರ್ದೇಶಕ, ನಟ, ನಿರ್ದೇಶಕ ಸಾಧುಕೋಕಿಲ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಮಾಡಿದೆ.
ತಮ್ಮ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ರದ್ದುಪಡಿಸುವಂತೆ ಕೋರಿ ಸಾಧುಕೋಕಿಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಒಂದು ವಾರದೊಳಗೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಒಂದು ವಾರದೊಳಗೆ ನೋಟಿಸ್‌ಗೆ ಉತ್ತರ ನೀಡಲು ಸೂಚಿಸಿದ ನ್ಯಾಯಾಲಯ, ಸಾಧುಕೋಕಿಲ ವಿರುದ್ಧ ಸಂಗ್ರಹಿಸಿರುವ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ತಾವು ತಪ್ಪಿತಸ್ಥರಲ್ಲ. ತಮಗೆ ಕಳಂಕ ತರಲು ಈ ಆರೋಪ ಮಾಡಲಾಗಿದೆ ಎಂದು ಸಾಧು ಕೋಕಿಲ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಎಫ್‌ಐಆರ್ ದಾಖಲು
ಮೈಸೂರಿನ ಮಸಾಜ್ ಪಾರ್ಲರ್‌ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. 2017ರ ಅ. 20ರಂದು ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಾಧು ಕೋಕಿಲ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.

ತೇಜೋವಧೆಗೆ ಪ್ರಯತ್ನ: ಸಾಧು ಆರೋಪ
ತಮ್ಮ ವಿರುದ್ಧ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ತಮ್ಮ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ. ಪೊಲೀಸರು ಕಾನೂನಿಗೆ ಅನುಗುಣವಾಗಿ ತನಿಖೆಯನ್ನೇ ನಡೆಸಿಲ್ಲ. ನಾನು ಅಲ್ಲಿಗೆ ಭೇಟಿಯನ್ನೇ ನೀಡಿಲ್ಲ ಎಂದ ಮೇಲೆ ಕೂಡ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಈ ಪ್ರಕರಣ ರದ್ದುಗೊಳಿಸಬೇಕು ಎಂದು ಸಾಧುಕೋಕಿಲ ಕೋರಿದ್ದಾರೆ.

ಪಾರ್ಲರ್‌ಗೇ ಬಂದಿರಲಿಲ್ಲ
ಸಾಧುಕೋಕಿಲ ಪರ ವಾದ ಮಂಡಿಸಿದ ವಕೀಲ ಚಂದ್ರಮೌಳಿ, ಈ ಪ್ರಕರಣದಲ್ಲಿ ಸಾಕ್ಷಿಗಳಲ್ಲಿ ಎಲ್ಲರೂ ಅವರು ಪಾರ್ಲರ್‌ಗೆ ಬಂದಿರಲಿಲ್ಲ ಎಂದೇ ಸಾಕ್ಷಿ ನುಡಿದಿದ್ದಾರೆ. ಪ್ರಕರಣ ಮುಂದುವರೆದರೆ ಸಾಧು ಕೋಕಿಲ ಅವರ ತೇಜೋವಧೆಯಾಗಲಿದೆ. ಪ್ರಕರಣದ ವಿಚಾರಣೆ ಮುಂದುವರಿದರೆ ಅವರಿಗೆ ಮಾನಸಿಕ ಹಿಂಸೆಯಾಗಲಿದೆ ಎಂದು ಹೇಳಿದರು.

ಮಂಡ್ಯ ರಮೇಶ್ ವಿರುದ್ಧ ಕೂಡ ಆರೋಪ
2017ರಲ್ಲಿ ಮಸಾಜ್ ಸೆಂಟರ್‌ವೊಂದರ ಯುವತಿ ನಟರಾದ ಸಾಧುಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ಆರೋಪ ಮಾಡಿದ್ದರು. ಸ್ಪಾಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ ನಟರಿಬ್ಬರೂ ತಮ್ಮನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು. ಪಾರ್ಲರ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಬಂದು ಪುರುಷರಿಗೆ ಮಸಾಜ್ ಮಾಡುವಂತೆ ಬಲವಂತ ಮಾಡಲಾಗುತ್ತಿತ್ತು. ಇಬ್ಬರೂ ನಟಿಗೆ ಎರಡು ಬಾರಿ ಬಾಡಿ ಮಸಾಜ್ ಮಾಡಿದ್ದೇನೆ. ಆ ಸಂದರ್ಭದಲ್ಲಿ ಅವರು ಲೈಂಗಿಕ ಕಿರುಕುಳ ನೀಡಿದ್ದರು. ಅಲ್ಲದೆ ಲೈಂಗಿಕ ಸುಖ ನೀಡುವಂತೆ ಹಣದ ಆಮಿಷ ಕೂಡ ಒಡ್ಡಿದ್ದರು ಎಂದು ಆರೋಪಿಸಿದ್ದರು.
ಈ ಆರೋಪವನ್ನು ಮಂಡ್ಯ ರಮೇಶ್ ಕೂಡ ತಳ್ಳಿಹಾಕಿದ್ದರು. ಆ ಸ್ಪಾ ಉದ್ಘಾಟನೆ ಮಾಡಿದ್ದು ನಾನೇ. ಆದರೆ ಆ ಯುವತಿ ಯಾರೆಂದು ನನಗೆ ತಿಳಿದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.












Click it and Unblock the Notifications