ಬೆಂಗಳೂರಿನಲ್ಲಿ ಹೈ ಅಲರ್ಟ್: ತಮಿಳು ಜನರ ಏರಿಯಾಗಳಲ್ಲಿ ಬಿಗಿ ಭದ್ರತೆ
ಬೆಂಗಳೂರು, ಸೆಪ್ಟೆಂಬರ್ 22: ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದ ಒಂದು ದಿನದ ನಂತರ, ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲು ನಗರದ ಎಲ್ಲಾ ಉಪ ಪೊಲೀಸ್ ಆಯುಕ್ತರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುತ್ತಿರುವು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸಿಸುವ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಡಿಸಿಪಿಗಳಿಗೆ ಆಯುಕ್ತರು ಆದೇಶಿಸಿದ್ದಾರೆ. ತಮಿಳುನಾಡಿಗೆ ಯಾಥಾವತ್ತಾಗಿ ಕಾವೇರಿ ನದಿ ನೀರು ಹರಿಸುವಂತೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶಕ್ಕೆ ಅಸಮಾಧಾನಗೊಂಡಿರುವ ಹಲವು ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಡಿಸಿಪಿಗಳಿಗೆ ಆದೇಶಿಸಿದ್ದಾರೆ. ಗುಪ್ತಚರ ವರದಿ ಆಧರಿಸಿ ಭದ್ರತೆ ಹೆಚ್ಚಿಸುವಂತೆ ಪೊಲೀಸ್ ಆಯುಕ್ತರು ಡಿಸಿಪಿಗಳಿಗೆ ಆದೇಶ ನೀಡಿದ್ದಾರೆ. ಉನ್ನತ ಪೋಲೀಸ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೆಳಗೆ ತಿಳಿಸಲಾದ ಸಂದರ್ಭಗಳಿಗೆ ಜಾಗರೂಕರಾಗಿರಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವ ಎಚ್ಚರಿಕೆ ನೀಡಲಾಗಿದೆ:
1. ರೈತ ಸಂಘಟನೆಗಳು ಮತ್ತು ಕನ್ನಡ ಪರ ಗುಂಪುಗಳು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲು ಪ್ರಯತ್ನಿಸಬಹುದು.
2 ತಮಿಳುನಾಡು ಬಸ್ಸುಗಳು ಅಥವಾ ತಮಿಳುನಾಡು ನೋಂದಾಯಿತ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
3. ಬೆಂಗಳೂರು ನಗರದಲ್ಲಿ ಹೆಚ್ಚಿನ ಸಾಂದ್ರತೆಯ ತಮಿಳು ಜನಸಂಖ್ಯೆಯು ವಾಸಿಸುವ ಪ್ರದೇಶಗಳಲ್ಲಿ ಹಿಂಸಾಚಾರದ ಸಾಧ್ಯತೆಗಳಿವೆ.
4. ಕಾವೇರಿ ವಿಚಾರವಾಗಿ ಹಲವಾರು ಚಲನಚಿತ್ರ ತಾರೆಯರು ಪ್ರತಿಕ್ರಿಯಿಸುತ್ತಿರುವುದರಿಂದ ಮುಂಬರುವ ಕೆಲವು ದಿನಗಳಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
5. ತಮಿಳು ಭಾಷಿಕ ಪ್ರದೇಶಗಳಾದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಜೆ.ಸಿ.ನಗರ, ಮಡಿವಾಳ, ಸಿಟಿ ಮಾರ್ಕೆಟ್, ಬಿಟಿಎಂ ಲೇಔಟ್ ಜಯನಗರ, ಮತ್ತು ಇತರ ಪ್ರದೇಶಗಳಲ್ಲಿ ಹಿಂಸಾಚಾರವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
6. ತಮಿಳು ಚಲನಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಮತ್ತು ಮಾಲ್‌ಗಳಲ್ಲಿ ಪ್ರತಿಭಟನೆಗಳು ನಡೆಯಬಹುದು.
7. ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಸಂಸದರು ಮತ್ತು ಶಾಸಕರ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿಭಟನೆಗಳು ನಡೆಯಬಹುದು.
ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ.












Click it and Unblock the Notifications