ಸೋಮವಾರದಿಂದ ಎಚ್ಡಿಕೆ ಉಪವಾಸ ಸತ್ಯಾಗ್ರಹ
ಬೆಂಗಳೂರು, ಆ.8 : 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯನ್ನು ರದ್ದುಪಡಿಸಿರುವ ಆದೇಶ ಹಿಂಪಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿದೆ. ಸೋಮವಾರದಿಂದ ಫ್ರೀಡಂಪಾರ್ಕ್ ನಲ್ಲಿ ಅಭ್ಯರ್ಥಿಗಳೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಹೇಳಿದ್ದಾರೆ.
ಶುಕ್ರವಾರ ಫ್ರೀಡಂಪಾರ್ಕ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ನೇಮಕಾತಿ ಆದೇಶವನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮವನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ, ಸರ್ಕಾರ ಆದೇಶ ಹಿಂಪಡೆಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. [ಕೆಪಿಎಸ್ ಸಿ ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು]

ಗುರುವಾರ ಸಂಜೆ ಅಭ್ಯರ್ಥಿಗಳನ್ನು ಭೇಟಿ ಮಾಡಿ ಸರ್ಕಾರ ನೇಮಕಾತಿ ಆದೇಶವನ್ನು ಶುಕ್ರವಾರ ಬೆಳಗ್ಗೆ 10 ಗಂಟೆಯೊಳಗೆ ವಾಪಸ್ ಪಡೆಯಬೇಕು ಎಂದು ಗಡುವು ನೀಡಿದ್ದೆ. ಇಲ್ಲವಾದಲ್ಲಿ ಅಭ್ಯರ್ಥಿಗಳ ಜೊತೆ ಸೇರಿ ಉಪವಾಸ ನಡೆಸುವುದಾಗಿ ತಿಳಿಸಿದ್ದೆ. ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ತಿಳಿಸಿದರು. [ಕೆಪಿಎಸ್ ಸಿ ವಿವಾದ ಯಾರು, ಏನು ಹೇಳಿದರು?]
ಕಣ್ಣೀರಿಟ್ಟ ಕುಮಾರಸ್ವಾಮಿ : ಅಭ್ಯರ್ಥಿಗಳ ಪರವಾಗಿ ಹೋರಾಟ ಮಾಡುತ್ತಿರುವುದರ ಬಗ್ಗೆ ಮಾತನಾಡುವಾಗ ಭಾವುಕರಾದ ಕುಮಾರಸ್ವಾಮಿ, ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸುವ ಮುನ್ನ ಇಲ್ಲಿ ಬಂದು ಅಭ್ಯರ್ಥಿಗಳ ಜೊತೆ ಒಂದು ಗಂಟೆ ಮಾತುಕತೆ ನಡೆಸಿದ್ದರೆ, ಇಂತಹ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಬಡ ಕುಟುಂಬದಿಂದ ಅಭ್ಯರ್ಥಿಗಳು ಇಲ್ಲಿದ್ದಾರೆ. ಕಷ್ಟಪಟ್ಟು ಓದಿ ಪರೀಕ್ಷೆ ಪಾಸಾಗಿದ್ದಾರೆ. ಕೆಲಸ ಸಿಕ್ಕಿತು ಎಂದು ಕೊಳ್ಳುತ್ತಿರುವಾಗಲೇ ಸರ್ಕಾರ ಇಂತಹ ನಿರ್ಧಾರ ಕೈಗೊಂಡು ಅವರ ಭವಿಷದ್ಯವನ್ನು ಕತ್ತಲಲ್ಲಿ ದೂಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಹಗರಣದ ಕುರಿತು ಚರ್ಚೆ ಮಾಡಲು ಸಾರ್ವಜನಿಕ ವೇದಿಕೆಗೆ ಬರುವಂತೆ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.












Click it and Unblock the Notifications