ಕುಮಾರಸ್ವಾಮಿಗೆ ಇನ್ನಷ್ಟು ಪ್ರಬುದ್ಧತೆ ಬೇಕು ಎಂದ ಬಸವರಾಜ ರಾಯ ರೆಡ್ಡಿ
ಬೆಂಗಳೂರು, ಜನವರಿ 29: ಮಾತಿಗೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡಬೇಕು. ಅವರಿಗೆ ಇನ್ನಷ್ಟು ಪ್ರಬುದ್ಧತೆ ಬೇಕು ಎಂದು ಮಾಜಿ ಸಚಿವ-ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ನಮಗೆ ಈಗಲೂ ಮುಖ್ಯಮಂತ್ರಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಕೆರಳಿದ್ದ ಕುಮಾರಸ್ವಾಮಿ, ಹಾಗಿದ್ದರೆ ನಾನು ಕುರ್ಚಿ ಬಿಟ್ಟು ಇಳಿಯಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.
ಈ ವಿಚಾರದ ಬಗ್ಗೆ ಮಾತನಾಡಿದ ಬಸವರಾಜ ರಾಯರೆಡ್ಡಿ, ಎಂಬತ್ತು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷವು ಮೂವತ್ತೇಳು ಸ್ಥಾನ ಗೆದ್ದ ಜೆಡಿಎಸ್ ಗೆ ಅಧಿಕಾರ ಬಿಟ್ಟುಕೊಟ್ಟಿದ್ದೆ. ಪಕ್ಷದ ಔದಾರ್ಯವನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಪದೇಪದೇ ರಾಜೀನಾಮೆ ನೀಡುವ ಮಾತುಗಳನ್ನು ಆಡಬಾರದು ಎಂದು ಹೇಳಿದ್ದಾರೆ.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಮೈತ್ರಿ ಸರಕಾರ ರಚಿಸಲು ಮುಂದಾದೆವು. ಕಾಂಗ್ರೆಸ್ ನ ಶಾಸಕರಿಂದ ಕುಮಾರಸ್ವಾಮಿ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಮಗೆಲ್ಲ ಸಿದ್ದರಾಮಯ್ಯ ಅವರ ಮೇಲೆ ಅಭಿಮಾನ ಇರುವುದು ನಿಜ. ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಬಯಸುವುದು ಸಹ ನಿಜ. ಆದರೆ ಅದರಿಂದ ಈಗಿನ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.












Click it and Unblock the Notifications