ತಮಿಳುನಾಡಿಗೆ ಕಾವೇರಿ: ಸರ್ಕಾರದ ವಿರುದ್ಧ ಎಚ್ ಡಿಕೆ ಗುಡುಗು
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ. ಮೊದಲು ರಾಜ್ಯದ ಕೆರೆ, ಕಟ್ಟೆಗಳನ್ನು ತುಂಬಿಸಿಕೊಳ್ಳುವಂತೆ ಆಗ್ರಹ. ನೀರು ನಿಲ್ಲಿಸದಿದ್ದರೆ ರೈತರ ಜತೆ ಜೆಡಿಎಸ್ ಪ್ರತಿಭಟನೆಯ ಎಚ್ಚರಿಕೆ.
ಬೆಂಗಳೂರು, ಜುಲೈ 3: ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡಿಸಿದ್ದಾರೆ.
ನಗರದಲ್ಲಿರು ಜೆಡಿಎಸ್ ಕೇಂದ್ರ ಕಚೇರಿಯಾದ ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೊದಲು ನಮ್ಮ ರಾಜ್ಯದ ಕೆರೆ ಕಟ್ಟೆಗಳನ್ನು ತುಂಬಿಸಿದ ನಂತರವಷ್ಟೇ ನೀವು (ಸರ್ಕಾರ) ನೀರು ಬಿಡಬೇಕು'' ಎಂದು ಆಗ್ರಹಿಸಿದರು.

''ತಮಿಳುನಾಡು ಸರ್ಕಾರ ನೀರಿಗಾಗಿ ಯಾವುದೇ ಕೋರಿಕೆ ಸಲ್ಲಿಸಿಲ್ಲವಾದರೂ ನೀರು ಹರಿಸಿದ್ದೇಕೆ?'' ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈಗ ನೀರು ಬಿಟ್ಟು ಅಣೆಕಟ್ಟನ್ನು ಬರಿದು ಮಾಡಿಕೊಳ್ಳಬೇಕಾಗುತ್ತದೆ. ಕೇಳುವುದಕ್ಕೂ ಮುನ್ನವೇ ನೀರು ಬಿಟ್ಟಿದ್ದಾರೆಂದು ತಮಿಳುನಾಡು ಸರ್ಕಾರ ಔದಾರ್ಯ ತೋರುವುದಿಲ್ಲ. ಮುಂದೆ ನೀರಿನ ಸಮಸ್ಯೆಯಾದಾಗ ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ವರೆಗೂ ಹೋಗಿ ವಾದ ಮಂಡಿಸುತ್ತದೆ. ಆಗ ಮತ್ತೊಮ್ಮೆ ನೀರು ಬಿಡಲೇಬೇಕಾಗುತ್ತದೆ'' ಎಂದು ಅವರು ವಾಗ್ದಾಳಿ ನಡೆಸಿದರು.
''ಕಾವೇರಿ ನ್ಯಾಯಾಧೀಕರಣದ ತೀರ್ಪಿನ ನೆಪವೊಡ್ಡಿ, ನೀರು ಬಿಟ್ಟರೆ, ನಮ್ಮ ರಾಜ್ಯದ ರೈತರ ಹಿತವನ್ನು ಕಡೆಗಣಿಸಿದರೆ, ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಆಗ ಜೆಡಿಎಸ್ ಪಕ್ಷವು ರೈತರ ಬೆನ್ನಿಗೆ ಖಂಡಿತವಾಗಿಯೂ ನಿಲ್ಲುತ್ತದೆ'' ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications