ದಶಕದಲ್ಲಿ ಎರಡನೇ ಬಾರಿ ಪುನಶ್ಚೇತನಗೊಳ್ಳಲಿದೆ ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆ
ಬೆಂಗಳೂರು, ಜುಲೈ. 09: ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದ ಹಲಗೆವಡೇರಹಳ್ಳಿ ಕೆರೆಯಲ್ಲಿ ಪುನಃಸ್ಥಾಪನೆ ಕಾರ್ಯಗಳನ್ನು ಮಧ್ಯದಲ್ಲಿ ನಿಲ್ಲಿಸಲಾಗಿದ್ದು, ಎರಡು ವಾರಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತೆ ಕೆಲಸಗಳನ್ನು ಪುನರಾರಂಭಿಸಲಿದೆ. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗದ ಕಾರಣ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಪೌರಾಯುಕ್ತರು.
0.5 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಲು ನಾಗರಿಕ ಸಂಸ್ಥೆ ಯೋಜಿಸುತ್ತಿದೆ. ಹಲಗೆವಡೇರಹಳ್ಳಿ ಕೆರೆಯು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಕಿಂಗ್ ಪಾತ್ ಸೇರಿದಂತೆ 16 ಎಕರೆಗೂ ಹೆಚ್ಚು ವಿಸ್ತಾರವಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಐತಿಹಾಸಿಕವಾಗಿ ಕೆರೆಯು ತನ್ನ ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು ಮತ್ತು ಹತ್ತು ವರ್ಷಗಳ ಹಿಂದೆ ಪುನರುಜ್ಜೀವನಗೊಂಡಿತು.

ಸಾಮಾಜಿಕ ಜಾಲತಾಣಗಳಲ್ಲಿ ಕೆರೆಯ ದುಸ್ಥಿತಿಯನ್ನು ತಿಳಿಸಿರುವ ಕೆರೆ ಸಂರಕ್ಷಣಾಧಿಕಾರಿ ಜೋಸೆಫ್ ಹೂವರ್, "ಹಲಗೆವಡೇರಹಳ್ಳಿ ಕೆರೆ ನಿರ್ಲಕ್ಷ್ಯದ ಸ್ಥಿತಿಯಲ್ಲಿದೆ. ನವೆಂಬರ್ 2022 ರ ಎರಡನೇ ವಾರದಲ್ಲಿ ಪುನಶ್ಚೇತನ ಕಾರ್ಯವನ್ನು ಪ್ರಾರಂಭಿಸಲಾಯಿತು. ಆದರೆ ಈ ವರ್ಷದ ಮೇ ತಿಂಗಳಿನಿಂದ ಅದನ್ನು ಕೈಬಿಡಲಾಗಿದೆ. ಎಸ್‌ಟಿಪಿ ಅಗತ್ಯವಾಗಿದ್ದರೂ, ಕೆರೆಯ ಹೂಳು ತೆಗೆಯುವುದನ್ನು ಬುದ್ದಿವಂತಿಕೆಯಿಂದ ತಪ್ಪಿಸಬಹುದಿತ್ತು" ಎಂದಿದ್ದಾರೆ.
''ಬಿಬಿಎಂಪಿ ದಾಖಲೆಗಳ ಪ್ರಕಾರ 2012ರಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಯ ಹೂಳು ತೆಗೆಯಲಾಗಿತ್ತು. ಪೂರ್ವ ಭಾಗದಿಂದ ಹರಿಯುವ ಕೊಳಚೆ ನೀರು ಬಿಟ್ಟರೆ ಹೂಳು ಇರುವುದು ಅತ್ಯಲ್ಪ. ಭ್ರಷ್ಟ ರಾಜಕಾರಣಿಯೊಬ್ಬರು ಸಾರ್ವಜನಿಕ ಹಣವನ್ನು ದೋಚಲು ಬಿಬಿಎಂಪಿಯ ಕೈಗಳನ್ನು ಬಲವಂತಪಡಿಸಿರುವುದು ಸ್ಪಷ್ಟವಾಗಿದೆ. ಕೆರೆಯ ಪರಿಸರವನ್ನು ನಾಶಪಡಿಸಲಾಗಿದೆ ಮತ್ತು ಸಾರ್ವಜನಿಕ ಹಣ ವ್ಯರ್ಥವಾಗಿದೆ" ಎಂದು ಜೋಸೆಫ್ ಹೂವರ್ ಆರೋಪಿಸಿದ್ದಾರೆ.
"ಪುನಶ್ಚೇತನ ಕಾಮಗಾರಿ ಕೈಗೊಳ್ಳಲು ಕೆರೆಯಿಂದ ನೀರು ಹರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆಗಳು) ವಿಜಯ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣ ಕಾಮಗಾರಿ ವಿಳಂಬವಾಗಿದೆ. ಇನ್ನೆರಡು ವಾರಗಳಲ್ಲಿ ಇದು ಪುನರಾರಂಭವಾಗಲಿದೆ. ಸಂಸ್ಕರಿಸಿದ ನೀರು ಮಾತ್ರ ಕೆರೆಗೆ ಸೇರುವಂತೆ ಎಸ್‌ಟಿಪಿ ಅಳವಡಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ರಾಜರಾಜೇಶ್ವರಿನಗರದ ನಿವಾಸಿ ವಿನಾಯಕ್ ದಿನ್ನಿ ಮಾತನಾಡಿ, "ಕೆಲ ಕಿಲೋಮೀಟರ್ ದೂರದಲ್ಲಿರುವ ಕೆಂಚನಹಳ್ಳಿ ಕೆರೆಗೆ ಕಾಯಕಲ್ಪ ನೀಡುವ ಬದಲು ದಶಕದ ಹಿಂದೆ ಹೂಳು ತೆಗೆದ ಕೆರೆಗೆ ಹಣ ಪೋಲು ಮಾಡಲಾಗುತ್ತಿದೆ. ಬಿಬಿಎಂಪಿ ವಿಷಯಗಳಿಗೆ ಆದ್ಯತೆ ನೀಡಬೇಕು. ಕೆಂಚನಹಳ್ಳಿ ಕೆರೆ ಸಮೀಪವೇ ಇದ್ದು, ಚರಂಡಿಯಾಗಿ ಮಾರ್ಪಟ್ಟಿದೆ" ಎಂದು ಕಿಡಿಕಾರಿದ್ದಾರೆ.
"ಹಲಗೆವಡೇರಹಳ್ಳಿ ಕೆರೆ ಮೊದಲು 35 ಜಾತಿಯ ಪಕ್ಷಿಗಳನ್ನು ಆಕರ್ಷಿಸುತ್ತಿತ್ತು. ಪುನಃಸ್ಥಾಪನೆ ಕಾರ್ಯ ಪ್ರಾರಂಭವಾದ ನಂತರ, ಈ ಪಕ್ಷಿಗಳು ಎಲ್ಲಿಯೂ ಕಂಡುಬರುವುದಿಲ್ಲ. ಹಿಂದಿನ ಕೆಲಸಗಳ ನಂತರ, ಭಾರೀ ಮಳೆಯ ಸಮಯದಲ್ಲಿ ಕೆರೆಗೆ ಸಮಾನಾಂತರವಾಗಿ ಹರಿಯುವ ಮಳೆನೀರಿನ ಚರಂಡಿಯಿಂದ ಒಳಚರಂಡಿ ನೀರು ಉಕ್ಕಿ ಹರಿದು ಕೆರೆಗೆ ಸೇರಿತು" ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ರಾಜರಾಜೇಶ್ವರಿನಗರದ ಎಲ್ಲ ಕೆರೆಗಳ ನೀರಿನ ಗುಣಮಟ್ಟ ಸೂಚ್ಯಂಕ ಪ್ರಕಟಿಸಿದ್ದರೂ ಹಲಗೆವಡೇರಹಳ್ಳಿ ಕೆರೆಯ ವಿವರ ನೀಡಿಲ್ಲ. ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಮಾಡಿದ ಕರೆಗಳಿಗೆ ಉತ್ತರಿಸಲಾಗಿಲ್ಲ. ಇತ್ತೀಚೆಗಷ್ಟೇ ರಾಜರಾಜೇಶ್ವರಿನಗರದಲ್ಲಿರುವ ಹೊಸಕೆರೆಹಳ್ಳಿ ಕೆರೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಕ್ಕೆ ಬಿಬಿಎಂಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ನಂತರ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿತ್ತು.
(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)












Click it and Unblock the Notifications