ಮಣ್ಣುತಿಂದ ಮೊಮ್ಮಗಳನ್ನು ನೇಣುಹಾಕಿ ಕೊಂದ ಅಜ್ಜಿ
ಬೆಂಗಳೂರು, ಡಿ.16 : ಮಕ್ಕಳು ತುಂಟಾಟವಾಡಿದರೆ ದೊಡ್ಡವರು ಸಹಿಸಿಕೊಳ್ಳುತ್ತಾರೆ. ಆದರೆ, ಮೊಮ್ಮಗಳ ತುಂಟಾಟಕ್ಕೆ ಸಿಟ್ಟಿಗೆದ್ದ ಅಜ್ಜಿ ಬಾಲಕಿಯನ್ನು ಥಳಿಸಿ, ನೇಣು ಬಿಗಿದು ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬೈಚಾಪುರದಲ್ಲಿ ನಡೆದಿದೆ.
ಅಜ್ಜಿಯಿಂದ ಕೊಲೆಯಾದ ಬಾಲಕಿಯನ್ನು ದಿವ್ಯಾ (7) ಎಂದು ಗುರುತಿಸಲಾಗಿದೆ. ಮೊಮ್ಮಗಳನ್ನೇ ಕೊಂದ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯ ಮುಂದೆ ಆಟವಾಡುವಾಗ ದಿವ್ಯಾ ಮಣ್ಣು ಬಾಯಿಗೆ ಹಾಕಿಕೊಂಡಳು ಎಂಬ ಕಾರಣಕ್ಕೆ ಅಜ್ಜಿ ಆಕೆಯನ್ನು ಥಳಿಸಿ ಕೊಲೆ ಮಾಡಿದ್ದಾರೆ.

ದಿವ್ಯಾ ಚಿಕ್ಕಪ್ಪ ನೀಡಿದ ದೂರಿನ ಅನ್ವಯ ದೇವನಹಳ್ಳಿ ಪೊಲೀಸರು ಕೊಲೆ ಮಾಡಿದ ಆರೋಪಿ ಅಕ್ಕಯ್ಯಮ್ಮನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ಕಯ್ಯಮ್ಮನಿಗೆ ಕುಡಿತದ ಚಟವಿತ್ತು ಎಂದು ದಿವ್ಯಾ ಚಿಕ್ಕಪ್ಪ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. [ದೇವನಹಳ್ಳಿಯಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿ]
ದಿವ್ಯಾಳನ್ನು ಚಿಕ್ಕಪ್ಪ ಸಾಕುತ್ತಿದ್ದರು : ದಿವ್ಯಾ ತಂದೆ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದರು. ತಾಯಿ ಶಶಿಕಲಾ ಪತಿಯ ಸಾವಿನ ನಂತರ ಮಗುವನ್ನು ಬಿಟ್ಟು ಊರು ತೊರೆದಿದ್ದರು. ನಂತರ ದಿವ್ಯಾ ಚಿಕ್ಕಪ್ಪ ಗಜೇಂದ್ರ ಅವಳನ್ನು ಸಾಕುತ್ತಿದ್ದರು. ಎರಡೂವರೆ ತಿಂಗಳ ಹಿಂದೆ ದಿವ್ಯಾ ಅಜ್ಜಿಯ ಮನಗೆ ಬಂದಿದ್ದರು.
ಭಾನುವಾರ ಸಂಜೆ ಮನೆ ಎದುರು ಆಟವಾಡುವಾಗ ಸ್ವಲ್ಪ ಮಣ್ಣನ್ನು ದಿವ್ಯಾ ಬಾಯಿಗೆ ಹಾಕಿಕೊಂಡಿದ್ದಳು. ಇದನ್ನು ಕಂಡು ಸಿಟ್ಟಿಗೆದ್ದ ಅಜ್ಜಿ ಅಕ್ಕಯ್ಯಮ್ಮ ಬಾಲಕಿಗೆ ಮನ ಬಂದಂತೆ ಥಳಿಸಿದ್ದಾಳೆ. ನಂತರ ಕೈಗೆ ಸಿಕ್ಕ ಹಗ್ಗದಿಂದ ಬಾಲಕಿಯ ಕುತ್ತಿಗೆ ಬಿಗಿದಿದ್ದಾಳೆ. ಗಜೇಂದ್ರ ಅವರು ರಾತ್ರಿ ಮನೆಗೆ ಬಂದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ.












Click it and Unblock the Notifications