ರಾಜ್ಯ ಸರ್ಕಾರದಿಂದ ರೈತರ ಖಾತೆಗೆ 628 ಕೋಟಿ ರೂಪಾಯಿ ಹಣ ಬಿಡುಗಡೆ
ಬೆಂಗಳೂರು, ಫೆಬ್ರವರಿ.11: ರಾಜ್ಯದಲ್ಲಿ ಈ ವರ್ಷ ಬರ ಬಂದಿದ್ದು, ಬರ ನಿರ್ವಹಣೆಗೆ ಪರಿಹಾರ ಕ್ರಮವಾಗಿ 2000 ಕೋಟಿ ರೂಪಾಯಿ ಅನುದಾನವನ್ನು ನಿಗದಿ ಪಡಿಸಲಾಗಿದೆ. ಇದರಲ್ಲಿ ಈಗಾಗಲೇ 628 ಕೋಟಿ ರೂಪಾಯಿ ಹಣವನ್ನು ನೇರವಾಗಿ 33 ಲಕ್ಷ ರೈತರ ಖಾತೆಗೆ ಬಿಡುಗಡೆ ಮಾಡಿಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಡನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ,"1.6 ಲಕ್ಷ ರೈತರ ಬ್ಯಾಂಕ್ ಖಾತೆಯ ಮಾರ್ಪಾಡು ಪ್ರಕ್ರಿಯೆ ನಡೆಯುತ್ತಿದ್ದು, ಇದು ಸರಿಯಾದ ಕೂಡಲೇ ಅವರ ಖಾತೆಗಳಿಗೂ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಬರ ಪರಿಹಾರ ಬಿಡುಗಡೆ ಮಾಡಿರುವ ರೈತ ಪಟ್ಟಿಯಲ್ಲಿ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ, ಹೆಸರು ಸೇರ್ಪಡಿಕೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ರೈತರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 223 ಬರ ಪೀಡಿತ ತಾಲೂಕುಗಳು
ರಾಜ್ಯದ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಿಸಿಲಾಗಿದೆ. ಕುಡಿಯುವ ನೀರು, ಮೇವು ಹಾಗೂ ಇತರೆ ಮೂಲಭೂತ ಸಮಸ್ಯೆಗಳ ನಿವಾರಣೆಗೆ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಳ ಖಾತೆಗಳಿಗೆ 870 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಹಾರದ ಹಣವನ್ನು ಸಮರ್ಪಕವಾಗಿ ಬಳಸಲು, ಶಾಸಕರ ಅಧ್ಯಕ್ಷತೆಯಲ್ಲಿ 223 ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ, 431 ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 236 ಟಾಸ್ಕ್ ಫೋರ್ಸ್ ಸಮಿತಿಯ ಸಭೆಗಳು ನಡೆದಿವೆ.

ರಾಜ್ಯದ 156 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಮೇಲೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 46 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿನ 46 ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಕಳೆದ ಐದು ವರ್ಷದ ಅಂಕಿಅಂಶಗಳ ಆಧಾರದಮೇಲೆ, ಮುಂಜಾಗ್ರತಾ ಕ್ರಮವಾಗಿ, ಮುಂಬರುವ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ 782 ಗ್ರಾಮಗಳು ಹಾಗೂ 1193 ವಾರ್ಡ್ ಗಳನ್ನು ಗುರುತಿಸಲಾಗಿದೆ.
ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗೆ ಹೊಸ ಕೊಳವೆ ಬಾವಿಗಳ ಕೊರೆಯುವ ಅವಶ್ಯಕತೆ ಇದ್ದಲ್ಲಿ, ಕೊಳವೆ ಬಾವಿಗಳನ್ನು ಕೊರೆಯಲು ಕ್ರಮವಹಿಸುವಂತೆ ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ತಿಳಿಸಿದ್ದಾರೆ.
7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ವಿತರಣೆ
ಮೇವಿನ ಸಮಸ್ಯೆ ನೀಗಿಸಲು 2023ರ ನವೆಂಬರ್ ತಿಂಗಳಲ್ಲಿ ಮೊದಲ ಹಂತದ ಕ್ರಮವಾಗಿ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‌ಗಳನ್ನು ರೈತರಿಗೆ ನೀಡಲಾಗಿದ್ದು, ಎರಡನೇ ಹಂತವಾಗಿ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ರೈತರಿಗೆ ವಿತರಿಸಲು ಪಶುಸಂಗೋಪನೆ ಇಲಾಖೆಗೆ ಹಣ ಬಿಡುಗಡೆ ಮಾಡಿದೆ. ರಾಜ್ಯದ ವಿವಿಧೆಡೆ 3 ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಮೇವಿನ ದಾಸ್ತಾನಿಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications