BDA flat: ಫ್ಲಾಟ್ ಖರೀದಿ, ಜನರಿಗೆ ಸಿಹಿಸುದ್ದಿ ಕೊಟ್ಟ ಬಿಡಿಎ
ಬೆಂಗಳೂರು, ಫೆಬ್ರವರಿ 27; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಫೆಬ್ರವರಿ 17ರಂದು ಫ್ಲಾಟ್/ ನಿವೇಶನ ಖರೀದಿ ಮೇಳ ಆಯೋಜನೆ ಮಾಡಿತ್ತು. ಈ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಜನರಿಗೆ ಮತ್ತೊಂದು ಸಿಹಿಸುದ್ದಿಯನ್ನು ಬಿಡಿಎ ನೀಡಿದೆ.
ಬಿಡಿಎ ಈಗ 'ಕ್ರಯ ಪತ್ರ ಮೇಳ'ವನ್ನು ಆಯೋಜನೆ ಮಾಡಿದೆ. ಬಿಡಿಎ ಕೇಂದ್ರ ಕಛೇರಿಯ ಆವಣರದಲ್ಲಿರುವ ಗಾಜಿನ ಮನೆಯಲ್ಲಿ ಫ್ಲಾಟ್ ಖರೀದಿಗೆ ಹಣ ಸಂದಾಯ ಮಾಡಿದ ಯುಟಿಐ ಸಂಖ್ಯೆ ಸೇರಿದಂತೆ ಇತರ ದಾಖಲೆಗಳನ್ನು ತಂದು ಜನರು ಕ್ರಯ ಪತ್ರವನ್ನು ಪಡೆಯಬಹುದು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಡಿಎ ಪೋಸ್ಟ್ ಹಾಕಿದ್ದು, ಅಗತ್ಯ ದಾಖಲೆಗಳ ಜೊತೆ ಜನರು ಆಗಮಿಸಿದರೆ 15/03/2024ರೊಳಗೆ ಆಯಾ ಫ್ಲಾಟ್‌ಗಳನ್ನು ಹಂಚಿಕೆದಾರರಿಗೆ ನೋಂದಣಿ ಮಾಡಿಕೊಡಲಾಗುವುದು ಎಂದು ಹೇಳಿದೆ.
ಜಾಹೀರಾತು ವಿವರಗಳು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವ ಆಲೂರು, ಗುಂಜೂರು, ತಿಪ್ಪಸಂದ್ರ, ವಲಗೇರಹಳ್ಳಿ, ಕಣಿಮಿಣಿಕೆ, ಕೊಮ್ಮಘಟ್ಟ, ಕೋನದಾಸಪುರ, ಚಂದ್ರಾ ಬಡಾವಣೆ (ನಾಗರಬಾವಿ) ವಸತಿ ಸಮುಚ್ಛಯಗಳಲ್ಲಿ ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ ಪ್ರಾರಂಭಿಕ ಠೇವಣಿ ಮೊತ್ತವನ್ನು ಪಾವತಿಸಿ, ಹಂಚಿಕೆ ಪತ್ರವನ್ನು ಸ್ವೀಕರಿಸಿರುವ ಹಂಚಿಕೆದಾರರಿಗೆ ಈ ಮಾಹಿತಿ ನೀಡಿದೆ.
ಫ್ಲಾಟ್‌ನ ಪೂರ್ಣ ಮೊತ್ತವನ್ನು ದಿನಾಂಕ 2/03/2024 ರೊಳಗೆ ಪಾವತಿಸಿ, ಈಗಾಗಲೇ ಪೂರ್ಣ ಹಣ ಪಾವತಿಸಿರುವವರು ಪಾವತಿಸಿದ ವಿವರಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ದಿನಾಂಕ 15/03/2024ರೊಳಗೆ ಆಯಾ ಫ್ಲಾಟ್‌ಗಳನ್ನು ಹಂಚಿಕೆದಾರರಿಗೆ ನೋಂದಣಿ ಮಾಡಿಕೊಡಲಾಗುವುದು ಎಂದು ಹೇಳಿದೆ.
ಫ್ಲಾಟ್ ಖರೀದಿದಾರರು ತಮ್ಮ ನೆಚ್ಚಿನ ಫ್ಲಾಟ್ ಖರೀದಿಸಲು, ಸಂಬಂಧಿಸಿದ ದಾಖಲೆಗಳಾದ ಆನ್‌ಲೈನ್ ಮೂಲಕ ಫ್ಲಾಟ್ ಖರೀದಿಗೆ ಹಣ ಸಂದಾಯ ಮಾಡಿದ ಬಳಿಕ ಪಡೆದ ಯುಟಿಐ ಸಂಖ್ಯೆ, ಆಧಾರ್ ಕಾರ್ಡ್ ಮೂಲ ಪ್ರತಿ, ಹಂಚಿಕೆ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಆವರಣದಲ್ಲಿ ಇರುವ ಗಾಜಿನ ಮನೆಯಲ್ಲಿರುವ ಕಚೇರಿಗೆ ಭೇಟಿ ನೀಡಿ ಸಲ್ಲಿಸಿದ ಬಳಿಕ ಕ್ರಯ ಪತ್ರ ಮಾಡಿಕೊಡಲಾಗುವುದು ಎಂದು ಬಿಡಿಎ ಹೇಳಿದೆ.
ಫೆಬ್ರವರಿ 17ರಂದು ಬಿಡಿಎ ಫ್ಲಾಟ್ ಮೇಳವನ್ನು ಆಯೋಜನೆ ಮಾಡಿತ್ತು. ಇದಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಕೋನದಾಸಪುರದಲ್ಲಿಈ ಫ್ಲಾಟ್/ ನಿವೇಶನ ಮೇಳ ಆಯೋಜಿಸಲಾಗಿತ್ತು.
ಮೇಳದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನ ನಿವಾಸಿ ಸುದೀಪ್ ದಂಪತಿಗಳು ಮಾತನಾಡಿ, "ಕೋನದಾಸಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಬೆಂಗಳೂರಿನಲ್ಲಿ ಮನೆ ಖರೀದಿಸುವ ಆಸೆಯನ್ನು ಹೊಂದಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಸೆಯನ್ನು ಈಡೇರಿಸಿದೆ" ಎಂದು ಸಂತೋಷ ವ್ಯಕ್ತಪಡಿಸಿದ್ದರು.
ಚಾಮರಾಜನಗರ ಮೂಲದ ಬೆಂಗಳೂರಿನ ನಿವಾಸಿಯಾದ ಮಲ್ಲು ದಂಪತಿಗಳು ಸಹಾ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಅನ್ನು ಖರೀದಿಸುವ ಆಶಯ ಹೊಂದಿದ್ದರು, ನಮ್ಮ ಆಶಯವನ್ನು ಬಿಡಿಎ ಪೂರ್ಣಗೊಳಿಸಿದೆ, ಅಲ್ಲದೇ ಕೊಮ್ಮಘಟ್ಟ ಫ್ಲಾಟ್‌ನ ಹಂಚಿಕೆ ಪತ್ರವನ್ನು ಸಹಾ ಸ್ಥಳದಲ್ಲಿಯೇ ಪಡೆದು ಸಂತಸ ವ್ಯಕ್ತಪಡಿಸಿದರು.
ಬಿಹಾರ ರಾಜ್ಯದ ಬೆಂಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿ ರಾಜೀವ್ ಕೋನದಾಸಪುರದಲ್ಲಿ ಫ್ಲಾಟ್ ಅನ್ನು ಖರೀದಿಸಿದ್ದು, ಕೋನದಾಸಪುರ ವಸತಿ ಸಮುಚ್ಛಯ ಕಟ್ಟಡದ ಬಗ್ಗೆ ವಿವರಿಸುತ್ತಾ ಫ್ಲಾಟ್‌ನ ಬೀಗದ ಕೀಲಿಯನ್ನು ಪಡೆದರು.
ಫ್ಲಾಟ್ ಮೇಳಕ್ಕೆ ಸುಮಾರು 700 ಜನರು ಭೇಟಿ ನೀಡಿದ್ದು, 100ಕ್ಕೂ ಹೆಚ್ಚು ಜನರು ಠೇವಣಿ ಮೊತ್ತವನ್ನು ಪಾವತಿಸಿ ಕಾಯ್ದಿರಿಸಿದ್ದಾರೆ. 50 ಹಂಚಿಕೆದಾರರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ವಿತರಿಸಲಾಗಿದೆ. ಬ್ಯಾಂಕ್ ಆಯ್ಕೆ ವಿಳಂಬವಾಗಿರುವುದರಿಂದ ಫಲಾನುಭವಿಗಳು ಠೇವಣಿ ಹಣ ಹಾಗೂ ಪೂರ್ಣ ಹಣವನ್ನು ಪಾವತಿಸಲು ಕಾಲಾವಕಾಶವನ್ನು ಕೋರಿದ್ದಾರೆ.












Click it and Unblock the Notifications