ಬೆಂಗಳೂರಿಗರಿಗೆ ಕಾದಿದೆ ನೀರಿನ ದರ ಏರಿಕೆ ಶಾಕ್
ಬೆಂಗಳೂರು, ಮೇ 7 : ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಹೆಚ್ಚಳದ ಶಾಕ್ ಸಹಿಸಿಕೊಂಡಿರುವ ಬೆಂಗಳೂರಿನ ಜನರಿಗೆ ನೀರಿನದರ ಹೆಚ್ಚಳದ ಶಾಕ್ ನೀಡಲು ಸಿದ್ಧತೆ ನಡೆದಿದೆ. ಬೆಂಗಳೂರು ಜಲಮಂಡಳಿ ನೀರಿನ ದರ ಹೆಚ್ಚಿಗೆ ಮಾಡಲು ಅನುಮತಿ ನೀಡಿ ಎಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಒತ್ತಾಯಿಸಿದೆ.
ಬುಧವಾರ ಜಲಮಂಡಳಿ ಕಚೇರಿಯಲ್ಲಿ ನಗರದ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿಲು ರಾಮಲಿಂಗಾ ರೆಡ್ಡಿ ಸಭೆ ನಡೆಸಿದರು. ಸಭೆಯಲ್ಲಿ ನೀರಿನ ಕೊರತೆಗಿಂತ ಹೆಚ್ಚಾಗಿ, ನೀರಿನ ದರ ಏರಿಕೆ ಬಗ್ಗೆಯೇ ಚರ್ಚೆ ನಡೆದಿದೆ. ನಷ್ಟದಲ್ಲಿರುವ ಜಲಮಂಡಳಿಗೆ ನೀರಿನ ದರ ಏರಿಕೆ ಮಾಡಲು ಅನುಮತಿ ನೀಡಬೇಕೆಂದು ಅಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.

ಜಲಮಂಡಳಿ ನಷ್ಟದಲ್ಲಿರುವುದರಿಂದ ಯಾವುದೇ ಹೊಸ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ. ಹೊಸ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರರೊಂದಿಗೆ ಚರ್ಚಿಸಿ, ದರ ಏರಿಕೆ ಮಾಡಲು ಸರ್ಕಾರದಿಂದ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದರು. [ದರ ಏರಿಕೆ ಪ್ರಸ್ತಾವನೆ ಹೀಗಿದೆ ನೋಡಿ]
ಎಷ್ಟು ಹಣಬೇಕು : ಜಲಮಂಡಳಿ 189 ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿದೆ. ವಾರ್ಷಿಕ ಬೋರ್ ವೆಲ್ ಗಳ ರಿಪೇರಿಗೆ 17 ಕೋಟಿ ರೂ. ಬೇಕು. ಮಳೆಗಾಲ ಸಮೀಪಿಸುತ್ತಿದೆ ನಗರದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಹಲವು ಹೊಸ ಕಾಮಗಾರಿ ಕೈಗೊಳ್ಳಬೇಕು. ಆದರೆ, ಜಲಮಂಡಳಿ ನಷ್ಟದಲ್ಲಿದೆ. ಆದ್ದರಿಂದ ನೀರಿನ ದರ ಹೆಚ್ಚಿಸಿ ಅನುದಾನ ಪಡೆಯಲು ಸಹಕಾರ ನೀಡಬೇಕೆಂದು ಅಧಿಕಾರಿಗಳು ವಿವರಣೆ ನೀಡಿದರು.
ಹೊಸತೇನಲ್ಲ : ನೀರಿನ ದರ ಹೆಚ್ಚಿಸಬೇಕು ಎಂಬುದು ಜಲಮಂಡಳಿಯ ಹೊಸ ಪ್ರಸ್ತಾವನೆಯೇನಲ್ಲ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮಂಡಳಿ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಪ್ರಸ್ತಾವನೆಯನ್ನು ತಳ್ಳಿ ಹಾಕಿತ್ತು. ಜಲಮಂಡಳಿ ಅಧಿಕಾರಿಗಳ ಪ್ರಕಾರ ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೀರಿನ ದರ ಹೆಚ್ಚಿಸಿಲ್ಲ. ಈ ಅವಧಿಯಲ್ಲಿ ಮಂಡಳಿಯ ಖರ್ಚು ವೆಚ್ಚಗಳು ಶೇ 50ರಷ್ಟು ಹೆಚ್ಚಾಗಿವೆ.
ಆದ್ದರಿಂದ ದರ ಹೆಚ್ಚಳ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಮುಂದೆಯೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ಹೊಸತರಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ. ಸದ್ಯ ಮತ್ತೊಮ್ಮೆ ನೀರಿನ ದರ ಏರಿಕೆ ಕೂಗು ಕೇಳಿಬಂದಿದೆ.












Click it and Unblock the Notifications