Namma Metro; ಆ. 21ರಿಂದ ಎನ್‌ಸಿಎಂಸಿ ಕಾರ್ಡ್ ಲಭ್ಯ
ಬೆಂಗಳೂರು, ಆಗಸ್ಟ್ 20: ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಆಗಸ್ಟ್ 21ರ ಸೋಮವಾರದಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮಾರಾಟ ಮಾಡಲಾಗುತ್ತದೆ. ನಿಲ್ದಾಣಗಳಲ್ಲಿಯೇ ಇವುಗಳ ರಿಚಾರ್ಜ್‌ಗೆ ವ್ಯವಸ್ಥೆ ಮಾಡಲಾಗಿದೆ.
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ನಮ್ಮ ಮೆಟ್ರೋ, ಬಿಎಂಟಿಸಿ ಸೇರಿ ದೇಶದ ಎಲ್ಲ ಸಾರಿಗೆ ವ್ಯವಸ್ಥೆಗಳು ಹಾಗೂ ಚಿಲ್ಲರೆ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇಂತಹ ಕಾರ್ಡ್ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸೋಮವಾರದಿಂದ ಲಭ್ಯವಿದೆ.

ಬಿಎಂಆರ್‌ಸಿಎಲ್ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಪ್ರಸ್ತುತ ಬಳಕೆಯಲ್ಲಿರುವ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಕ್ಲೋಸ್ಡ್ ಲೂಪ್ ಕಾರ್ಡ್‌ಗಳಾಗಿದ್ದು, ನಮ್ಮ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ ಎಂದು ಹೇಳಿದೆ.
'ಒನ್ ನೇಷನ್ ಒನ್ ಕಾರ್ಡ್'ಗೆ ಅನುಗುಣವಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಎಂಸಿ) ತೆರೆದ ಲೂಪ್ ಕಾರ್ಡ್‌ಗಳಾಗಿದ್ದು, ಈ ಕಾರ್ಡನ್ನು ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಗಳಲ್ಲಿ ಹಾಗೂ ಹೆಚ್ಚುವರಿಯಾಗಿ, ರಿಟೇಲ್ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಇತ್ಯಾದಿ ಅಗತ್ಯಗಳಿಗಾಗಿ ಬಳಸಲು ಅನುಕೂಲಕರವಾಗಿರುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಕಾರ್ಡ್ ಖರೀದಿಗೆ ಲಭ್ಯವಿದೆ; ದಿನಾಂಕ ಆಗಸ್ಟ್ 21ರ ಸೋಮವಾರದಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ಗಳು ಖರೀದಿಗೆ ಲಭ್ಯವಿರುತ್ತದೆ. ಜನರು ದೇಶಾದ್ಯಂತ ಪ್ರಯಾಣಕ್ಕೆ ಮತ್ತು ಶಾಪಿಂಗ್‌ಗೆ ಅನುಕೂಲವನ್ನು ಮಾಡಿಕೊಡುವ ಕಾರ್ಡ್‌ನ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಈ ಕಾರ್ಡ್‌ಗಳು ಪ್ರಯಾಣಕ್ಕೆ ಮತ್ತು ಶಾಪಿಂಗೆ ಬೇಕಾಗಿರುವ ವಿವಿಧ ಕಾರ್ಡ್‌ಗಳ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ. ನಮ್ಮ ಮೆಟ್ರೋ ಮುಂದಿನ ದಿನಗಳಲ್ಲಿ ಕಾಂಟ್ರ್ಯಾಕ್ಟಲೆಸ್ ಸ್ಮಾರ್ಟ್ ಕಾರ್ಡ್‌ಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಬಿಎಂಆರ್‌ಸಿಎಲ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕಾರ್ಡ್ ಪಡೆಯುವುದು ಹೇಗೆ?
* ರುಪೇ ಎನ್‌ಸಿಎಂಸಿ ಕಾರ್ಡ್ ತ್ವರಿತ ವಿತರಣೆಗಾಗಿ, ಪ್ರಯಾಣಿಕರು ತಮ್ಮ ಗ್ರಾಹಕರ ವಿವರ (KYC)ಯನ್ನು NAMMAMETRO.AGSINDIA.COM ಅಥವ BMRCL RBL Bank NCMC ಅಥವ ಅಪ್ಲಿಕೇಶನ್‌ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬೇಕು.
* ನೋಂದಣಿ ಸಂಖ್ಯೆ / ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಟಿಕೆಟ್ ಕೌಂಟರ್ ಇರುವ ನಿರ್ವಾಹಕರಿಗೆ ತಿಳಿಸಬೇಕು.
* ಕಾರ್ಡ್‌ನ ಮಾರಾಟ ಬೆಲೆ ರೂ 50. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಲಭ್ಯವಿರುವ ಶೇ 5 ಪ್ರಯಾಣ ದರದ ರೀಯಾತಿಯು ಎನ್ ಸಿಎಂಸಿ ಕಾರ್ಡ್‌ಗಳಿಗೂ ಅನ್ವಯ.
* ರೂಪೇ ಕಾಮನ್ ಮೊಬಿಲಿಟಿ ಕಾರ್ಡ್‌ಗಳು (NCMC) ಎಲ್ಲಾ ಆರ್.ಬಿ.ಎಲ್ (RBL) ಬ್ಯಾಂಕ್ ಶಾಖೆಗಳಲ್ಲೂ ಲಭ್ಯವಿರುತ್ತದೆ.
ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು ಕಾಂಟ್ಯಾಕ್ಸ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳು ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಲಭ್ಯ.
ಏನಿದು ಕಾರ್ಡ್?; ಭಾರತದಲ್ಲಿ ಮಾರ್ಚ್ 4, 2019ರಂದು 'ಒನ್ ನೇಷನ್ ಒನ್ ಕಾರ್ಡ್' ಎಂಬ ಅಡಿಬರಹದೊಂದಿಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಪರಿಚಯಿಸಲಾಗಿದೆ. ಡಿಜಿಟಲ್ ಪಾವತಿಗಳನ್ನುಉತ್ತೇಜಿಸುವ ಯೋಚನೆಯ ಭಾಗವಾಗಿ ಉನ್ನತ ಮಟ್ಟದ ಸಮಿತಿಯು (CDDP) ಎಲ್ಲಾ ಸಾರಿಗೆ ಸ್ಥಳಗಳಲ್ಲಿ NCMC ಕಾರ್ಡ್‌ಗಳನ್ನು ಬಳಸಬಹುದೆಂದು ಶಿಫಾರಸು ಮಾಡಿತ್ತು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಮುಕ್ತ ಲೂಪ್ ಕಾರ್ಡ್ ಆಗಿದೆ. ಇದನ್ನು ದೇಶದ ಎಲ್ಲಾ ಸ್ಥಳೀಯ ಪ್ರಯಾಣ ಅಗತ್ಯಗಳಿಗೆ ಬಳಸಬಹುದು. ಇದು ವಿವಿಧ ವಿಭಾಗಗಳಿಗೆ ಕಡಿಮೆ ಮೌಲ್ಯದ ಪಾವತಿಗಳ ಗುರಿಯನ್ನು ಸಹ ಹೊಂದಿದೆ.
ಸ್ಮಾರ್ಟ್ ಸಿಟಿಗಳು, ಟೋಲ್, ಪಾರ್ಕಿಂಗ್ ಮತ್ತು ಇತರ ಕಡಿಮೆ ಮೌಲ್ಯದ ವ್ಯಾಪಾರಿ ಪಾವತಿಗಳು, ಸಾಮಾನ್ಯ ದಿನದ ಚಿಲ್ಲರೆ ಪಾವತಿಗಳ ಜೊತೆಗೆ ಸಾರಿಗೆ ಸಂಚಾರದಲ್ಲಿಯೂ ಬಳಕೆ ಮಾಡಬಹುದಾಗಿದೆ.












Click it and Unblock the Notifications