ಗಣೇಶ ಚತುರ್ಥಿ; ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟ ಸಚಿವರು
ಬೆಂಗಳೂರು ಆಗಸ್ಟ್ 21: ಆಗಸ್ಟ್ 31ರಂದು ಗಣೇಶೋತ್ಸವ ಆರಂಭವಾಗಲಿದ್ದು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ಮತ್ತು ಸ್ಯಾಂಕಿ ಕೆರೆಯ ನಿರ್ವಹಣೆ ಸೇರಿದಂತೆ ಎಲ್ಲವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಿ" ಎಂದು ಶಾಸಕ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ಅಧಿಕಾರಿಗಳಿಗೆ ಸೂಚಿಸಿದರು.
ಭಾನುವಾರ ಬೆಂಗಳೂರಿನ ಮಲ್ಲೇಶ್ವರದ ಜಲಮಂಡಳಿ ಕಚೇರಿಯಲ್ಲಿ ಗಣೇಶೋತ್ಸವ ಆಚರಣೆ, ನಿರ್ವಹಣೆ ಕುರಿತು ಸಭೆ ನಡೆಸಿದ ಅವರು, ಪಾಲ್ಗೊಂಡಿದ್ದ ಬಿಬಿಎಂಪಿ, ಪೊಲೀಸ್ ಮತ್ತು ಅಗ್ನಿಶಾಮಕ ಪಡೆಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಈ ವರ್ಷ ಸಾರ್ವಜನಿಕರು ತಮ್ಮ ಮನೆ ಹಾಗೂ ಹೊರ ಭಾಗದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಪರಿಸರಕ್ಕೆ ವಿರುದ್ಧವಾದ ಪಿಒಪಿ, ಬಣ್ಣ ಮತ್ತಿತರ ಗಣೇಶ ಮೂರ್ತಿಗಳನ್ನು ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸ್ಯಾಂಕಿ ಕೆರೆ ಪರಿಸರದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಇದನ್ನು ತಡೆಯಲು ಮೊದಲ ಮೂರು ದಿನ ಭಾಷ್ಯಂ ವೃತ್ತದಿಂದ ಸ್ಯಾಂಕಿ ಕೆರೆಯ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಅನುವು ಮಾಡಬೇಕು. ಇದರಿಂದ ಈ ಭಾಗದ ಸಂಚಾರ ಸುಗಮವಾಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹೂವು ಮತ್ತು ಇತರ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದನ್ನು ಕೂಡಲೇ ತೆರವುಗೊಳಿಸಬೇಕು. ಇದಕ್ಕಾಗಿ ದೊಡ್ಡ ಗಾತ್ರದ ಕಸದ ಡಬ್ಬಗಳನ್ನು ಅಲ್ಲಲ್ಲಿ ಇಡಲು ಕ್ರಮ ವಹಿಸಬೇಕು. ಇದಲ್ಲದೆ ಗೇಣಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಅಥವಾ ಅವಘಡಗಳು ನಡೆಯದಂತೆ ನೋಡಿಕೊಳ್ಳಲು ಕೆರೆಯ ಸ್ಥಳದಲ್ಲಿ ಈಜುಗಾರರು ಸಜ್ಜಾಗಿರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವ ಮೂಲಕ ಅದ್ಧೂರಿ ಗಣೇಶೋತ್ಸವ ನಡೆಸಲು ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ನಿಗಾವಹಿಸಬೇಕು ಎಂದು ಅವರು ಹೇಳಿದರು.

ಅದ್ಧೂರಿ ಗಣೇಶೋತ್ಸವ ಹಿನ್ನೆಲೆ ಸಿದ್ಧತೆಗೆ ಸೂಚನೆ; ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷ ಗಣೇಶೋತ್ಸವ ಅಷ್ಟಾಗಿ ಸಂಭ್ರಮದಿಂದ ಅದ್ದೂರಿಯಾಗಿ ನಡೆದಿರಲಿಲ್ಲ. ಅಲ್ಲದೇ ಸರ್ಕಾರದ ಕೊನೆ ಗಳಿಗೆಯ ಮಾರ್ಗಸೂಚಿಗಳು, ಪರಿಸರ ಕಾಳಜಿ ಕುರಿತು ನಿಯಮಗಳಿಂದ ಗಣೇಶ ಹಬ್ಬ ಹೆಚ್ಚು ಸರಳವಾಗೇ ನಡೆದಿತ್ತು. ಆದರೆ ಈ ವರ್ಷ ಕೊರೋನಾ ವೈರಸ್ ಬಹುತೇಕ ಕಡಿಮೆ ಆಗಿದೆ.
ಈ ಕಾರಣದಿಂದ ನಗರಾದ್ಯಂತ ವಿಜೃಂಭಣೆಯ ಗಣೇಶೋತ್ಸವ ನಡೆಯಲಿದ್ದು, ಈ ಸಂಬಂಧ ಅಗತ್ಯ ಮುಂಜಾಗೃತಾ ಸಿದ್ಧತೆ, ನಿರ್ವಹಣೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಅಶ್ವಥ ನಾರಾಯಣ್ ಸಭೆ ನಡೆಸಿದರು. ಈ ವೇಳೆ ಸಭೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಎಸಿಪಿ ಅಧಿಕಾರಿಗಳು, ಪೊಲೀಸ್ ಇನ್ಸಪೆಕ್ಟರ್‌ಗಳು, ಬಿಬಿಎಂಪಿ ಎಂಜಿನಿಯರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications