ಬೆಂಗಳೂರು:ಗುರುವಾರ 45,722 ಗಣೇಶ ಮೂರ್ತಿ ವಿಸರ್ಜನೆ
ಬೆಂಗಳೂರು, ಸೆ.02: ಬಿಬಿಎಂಪಿ ವ್ಯಾಪ್ತಿಯ ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಹಾಗೂ ತಾತ್ಕಾಲಿಕ ನೀರಿನ ತೊಟ್ಟಿಗಳಲ್ಲಿ ಸೆಪ್ಟಂಬರ್ 2ರಂದು ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ ಒಟ್ಟು 45,722 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಬಾರಿ ಬೆಂಗಳೂರಿನಲ್ಲಿ ಸಾರ್ವಜನಿಕರು ಸಂಭ್ರಮ, ಸಡಗರದಿಂದ ಗಣೇಶೋತ್ಸವ ಆಚರಿಸಿದ್ದಾರೆ. ಅದರಲ್ಲೂ ಗಣೇಶ ಮೂರ್ತಿಗಳನ್ನು ಹೆಚ್ಚೆಚ್ಚು ಪ್ರತಿಷ್ಠಾಪಿಸಿದ್ದಾರೆ ಎಂಬುದು ವಿಶೇಷ. ಸಾರ್ವಜನಿಕರ ಈ ನಡೆ ಪರಿಸರಕ್ಕೆ ಪೂರಕವಾಗಿದೆ. ಪಿಓಪಿ ಗಣೇಶನನ್ನು ಜನ ಹಂತ ಹಂತವಾಗಿ ಮರೆಯುತ್ತಿದ್ದು, ಪರಿಸರ ಸ್ನೇಹಿ ಗಣೇಶನೊಂದಿಗೆ ಹಬ್ಬ ಆಚರಿಸಿದ್ದಾರೆ.
ಗಣೇಶ ಚತುರ್ಥಿ ಬಳಿಕ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಗದಿಪಡಿಸಿದ್ದ ತಾತ್ಕಲಿಕ ನೀರಿನ ಟ್ಯಾಂಕರ್, ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಹಾಗೂ ಇನ್ನಿತರ ನೀರಿನ ತೊಟ್ಟಿಗಳಲ್ಲಿ ಗಣೇಶನನ್ನು ವಿಸರ್ಜಿಸಿದ್ದಾರೆ. ಸೆಪ್ಟಂಬರ್ 1ರಂದು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 45,722 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇದರಲ್ಲಿ ಬೆರಳಣಿಕೆಯಷ್ಟು ಪಿಓಪಿ ಗಣೇಶ ಸೇರಿವೆ. ಉಳಿದೆಲ್ಲವು ಮಣ್ಣಿನ ಗಣೇಶ ಮೂರ್ತಿಗಳೇ ಆಗಿವೆ.

ಪಶ್ಚಿಮ ವಲಯದಲ್ಲಿ10,557 ಗಣೇಶ ವಿಸರ್ಜನೆ
ಪಶ್ಚಿಮ ವಲಯದಲ್ಲಿ ಗುರುವಾರ ಒಂದೇ ದಿನ 10,557 ಮಣ್ಣಿನ ಗಣೇಶ ಮೂರ್ತಿಗಳು ವಿಸರ್ಜನೆಗೊಂಡರೆ, ಕೇವಲ 43 ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ ಎಂಬುದು ಖಚಿತವಾಗಿದೆ.
ಇನ್ನು ಬಿಬಿಎಂಪಿ ದಕ್ಷಿಣ ವಲಯದಲ್ಲಿ 19,359 ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ಕೇವಲ 1,555 ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿದೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ 175 ಮಣ್ಣಿನ ಗಣೇಶ ಮೂರ್ತಿ ಮತ್ತು 05 ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶನನ್ನು ಜನರು ವಿಸರ್ಜಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ವಲಯದಲ್ಲಿ 5,898ಮೂರ್ತಿ ವಿಸರ್ಜನೆ
ಅದೇ ರೀತಿ ಪೂರ್ವ ವಲಯದಲ್ಲಿ 5,898 ಮಣ್ಣಿನ ಗಣೇಶ ಮೂರ್ತಿಗಳು ನೀರಿಗೆ ಬಿಡಲಾಗಿದೆ. ಇಲ್ಲಿ ಕೇವಲ ಮಣ್ಣಿನ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಲಾಗಿದ್ದು, ಒಂದು ಪಿಓಪಿ ಗಣೇಶ ಮೂರ್ತಿ ಗುರುವಾರ ವಿಸರ್ಜನೆಗೊಂಡಿಲ್ಲ. ರಾಜರಾಜೇಶ್ವರಿ ನಗರದಲ್ಲೂ ಸಹ
2,975 ಮಣ್ಣಿನ ಗಣಪನನ್ನು ಇಟ್ಟು ಪೂಜಿಸಿ ವಿಸರ್ಜಿಸಲಾಗಿದೆ. ಇಲ್ಲಿ ಕೂಡ ಒಂದೂ ಪಿಓಪಿ ಗಣೇಶ ಗುರುವಾರ ವಿಸರ್ಜನೆಗೊಂಡಿಲ್ಲ ಎಂದು ಬಿಬಿಎಂಪಿ ವರದಿ ಉಲ್ಲೇಖಿಸಿದೆ.

ಯಲಹಂಕ ವಲಯ 2,136ಮಣ್ಣಿನ ಗಣೇಶ ವಿಸರ್ಜನೆ
ಯಲಹಂಕ ವಲಯದಲ್ಲಿ 2,136ಮಣ್ಣಿನ ಗಣೇಶನನ್ನು ನೀರಿಗೆ ಬಿಡಲಾಗಿದೆ. ಪಿಓಪಿ ಗಣೇಶ ಮೂರ್ತಿ ವಿಸರ್ಜನೆ ಆಗಿಲ್ಲ. ಮಹದೇವಪುರ ವಲಯದಲ್ಲಿ 1,686 ಮಣ್ಣಿನ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ. ಇನ್ನೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಗುರುವಾರ ಒಟ್ಟು 1,286 ಪರಿಸರ ಸ್ನೇಹಿ ಗಣೇಶನನ್ನು ವಿಸರ್ಜಿಸಿದರೆ, ಕೇವಲ 44 ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಸಿದ್ದಗೊಂಡಿದ್ದ ಮೂರ್ತಿಗಳು ವಿಸರ್ಜನೆಗೊಂಡಿವೆ.

ತಾತ್ಕಾಲಿಕ ನೀರಿನ ತೊಟ್ಟಿಯಿಂದ ಅನುಕೂಲ
ನಗರಾದ್ಯಂತ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದರಿಂದ ಮೂರ್ತಿ ವಿಸರ್ಜನೆಗೆ ಯಾವುದೇ ತೊಂದರೆ ಆಗಿಲ್ಲ. ತಾತ್ಕಾಲಿಕ ನೀರಿನ ತೊಟ್ಟಿಗಳಲ್ಲಿ ಗಣೇಶನನ್ನು ವಿಸರ್ಜಿಸಿದರೆ ಮೂರ್ತಿಯ ಮಣ್ಣನ್ನು ಮರುಬಳಕೆಗೂ ಅನುಕೂಲವಾಗುತ್ತದೆ. ಅಲ್ಲದೇ ನೀರಲ್ಲಿ ಕರಗದ ಪಿಓಪಿ ಗಣೇಶ ಮೂರ್ತಿ ಸೂಕ್ತ ವಿಲೇವಾರಿ ಸಾಧ್ಯವಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications