ಗಣೇಶ ಚತುರ್ಥಿಗೆ ಪ್ರಸಾದ ಕೊಡೋಕೂ ಬಂತು ರೂಲ್ಸ್!
ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಇದಕ್ಕೆ ಬೇಕಾದ ತಯಾರಿಗಳು ಭರ್ಜರಿಯಾಗಿ ಸಾಗಿವೆ. ಗಣೇಶ ಪ್ರತಿಷ್ಠಾಪನೆ ಜೊತೆಗೆ ಬಗೆಬಗೆಯ ಪ್ರಸಾದ ವಿನಿಯೋಗಕ್ಕೂ ಈಗಿನಿಂದಲೇ ಜನ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ. ಆದರೆ, ಪ್ರಸಾದ ವಿನಿಯೋಗದ ವಿಚಾರವಾಗಿಯೂ ಇದೀಗ ಕೆಲವು ನಿಯಮಗಳನ್ನು ಜಾರಿ ಮಾಡಲಾಗಿದ್ದು, ಗಣೇಶನ ಕೂರಿಸಲು ಉತ್ಸಾಹದಲ್ಲಿದ್ದ ಮಂಡಳಿಗಳಿಗೆ ತುಸು ಶಾಕ್ ನೀಡಿದಂತಾಗಿದೆ.
ಈಗಾಗಲೇ ಗಣೇಶೋತ್ಸವ ಆಚರಿಸುವ ಯುವಕರ ಸಂಘಗಳಿಗೆ ಬೆಂಗಳೂರು ಪೊಲೀಸರು ಪ್ರತ್ಯೇಕ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದ್ದಾರೆ. ಯಾವುದೇ ಅನಾಹುತಗಳು ನಡೆಯದಿರಲಿ ಎನ್ನುವ ಕಾರಣಕ್ಕೆ ಜಾರಿ ಮಾಡಿರುವ ಇಷ್ಟು ಕಟ್ಟುನಿಟ್ಟಿನ ರೂಲ್ಸ್‌ಗಳಿಂದ ಜನ ಈಗಾಗಲೇ ಬೇಸತ್ತಿರುವುದೂ ನಿಜ. ಇದರ ಜೊತೆಗೆ ಈಗ ಪ್ರಸಾದ ವಿತರಣೆಗೆ ಕೆಲ ರೂಲ್ಸ್ ಅನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ಗಣೇಶನ ಉತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ನಿಗಾ ಇಡಲಾಗಿದ್ದು, ಪ್ರಾಧಿಕಾರದಿಂದ ಅನುಮತಿ ಪಡೆಯದೆ ಆಹಾರ ವಿತರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಆದೇಶ ಕೂಡ ಮಾಡಲಾಗಿದ್ದು, ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಪ್ರಸಾದವಾಗಿ ವಿತರಿಸಲಾಗುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು FSSAI ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.

ಪ್ರಸಾದ ವಿತರಣೆಯಿಂದ ಯಾವುದೇ ಅನಾಹುತಗಳು ಸಂಭವಿಸದಿರಲಿ ಎನ್ನುವ ಕಾರಣಕ್ಕೆ ಈ ನಿಯಮ ಜಾರಿ ಮಾಡಲಾಗಿದೆ. ಗಣೇಶನ ಹಬ್ಬಕ್ಕೆ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳಲ್ಲಿ ನೈರ್ಮಲ್ಯ, ಗುಣಮಟ್ಟ ಹಾಗೂ ಸುರಕ್ಷತೆ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳಿಗೆ ಸೂಚನೆ ನೀಡಿದೆ.
ಅದರಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಅಂತಹ ಸಂಸ್ಥೆಗಳಿಂದ ಮಾತ್ರವೇ ಪ್ರಸಾದ ಸಿದ್ಧಪಡಿಸಿ, ಅದನ್ನು ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಹೇಳಿದೆ. ಈಗಾಗಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಪೊಲೀಸ್ ಠಾಣೆ, ಬೆಸ್ಕಾಂ, ಸ್ಥಳೀಯ ಆಡಳಿತಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿದೆ.
ಇದೀಗ ಹಬ್ಬಕ್ಕೆ ವಿತರಿಸುವ ಪ್ರಸಾದದ ವಿಚಾರದಲ್ಲೂ ಪ್ರತ್ಯೇಕ ನಿಯಮವನ್ನು ರೂಪಿಸಿದೆ. ಇದಕ್ಕೆ ಗಣೇಶ ಪ್ರತಿಷ್ಠಾಪಿಸುವ ಮಂಡಳಿಯವರು ಕೆಲವೆಡೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನೆಮ್ಮದಿಯಾಗಿ ಹಬ್ಬ ಮಾಡಲು ಬಿಡುತ್ತಿಲ್ಲ. ಈಗಾಗಲೇ ಸಾಕಷ್ಟು ಕಾನೂನುಗಳನ್ನು ತಂದಿರುವುದರಿಂದ ಗಣೇಶನನ್ನು ಕೂರಿಸುವುದೇ ಬೇಡ ಎನಿಸುತ್ತಿದೆ. ಅನುಮತಿ ಪಡೆಯಲು ಪೊಲೀಸ್ ಠಾಣೆಗಳಿಗೆ ಹೋದರೆ ಅವರೂ ಸತಾಯಿಸುತ್ತಾರೆ ಎಂದೆಲ್ಲ ಅಳಲು ತೋಡಿಕೊಳ್ಳುತ್ತಿದ್ದಾರೆ.












Click it and Unblock the Notifications