B Nagendra First Reaction: ಇಡಿ ವಶದಲ್ಲಿರುವ ಮಾಜಿ ಸಚಿವ ನಾಗೇಂದ್ರ ಮೊದಲ ಪ್ರತಿಕ್ರಿಯೆ
ಬೆಂಗಳೂರು ಜುಲೈ 12: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಇಂದು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇಡಿ ವಶದಲ್ಲಿರುವ ನಾಗೇಂದ್ರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಶಾಂತಿನಗರ ಇಡಿ ಕಚೇರಿಯಿಂದ ನಾಗೇಂದ್ರ ಅವರು ಹೊರಬರುತ್ತಿದ್ದಂತೆ ಸುದ್ದಿಗಾರರಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ ನನಗೇನು ಗೊತ್ತಿಲ್ಲ' ಎಂದು ನಾಗೇಂದ್ರ ಹೇಳಿದ್ದಾರೆ. ಬುಧವಾರ ನಾಗೇಂದ್ರ ಅವರ ಪಿಎ ಹರೀಶ್ ಅವರನ್ನು ಜಾರಿ ನಿರ್ದೇಶನಾಲಯ(ED)ದ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿ ನಾಗೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ.

ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆಗೆ ಇತ್ತೀಚಿಗೆ ರಾಜೀನಾಮೆ ನೀಡಿದ್ದ ಮಾಜಿ ಬಿ. ನಾಗೇಂದ್ರ ಅವರನ್ನು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಶಾಂತಿನಗರದ ಕಚೇರಿಗೆ ಇಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಹಗರಣ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಳೆದ ಎರಡ್ಮೂರು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದರು. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನಿವಾಸಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಒಟ್ಟು ಹದಿನೆಂಟು ಕಡೆ ದಾಳಿ ಮಾಡಿ ಅಕ್ರಮ ವ್ಯವಹಾರದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿತ್ತು. ಬಸವನಗೌಡ ದಡ್ಡಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೂ ಇಡಿ ದಾಳಿ ನಡೆದಿದ್ದು, ಅಕ್ರಮಗಳ ಮಾಹಿತಿ ಲಭ್ಯವಾಗಿತ್ತು.

ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪ ಕೇಳಿಬಂದಿತ್ತು. ಪಂಪಣ್ಣ ಹಗರಣ ಕುರಿತು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.












Click it and Unblock the Notifications