ಯತ್ನಾಳ್ ಬಿಜೆಪಿಗೆ ಮರಳಲು ವೇದಿಕೆ ಸಜ್ಜು

ಕೇಂದ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಗೆ ಕರೆತರಲು ವೇದಿಕೆ ಸಿದ್ದಗೊಳ್ಳುತ್ತಿದೆ. ಬಹಿರಂಗವಾಗಿ ಈ ಬಗ್ಗೆ ಚರ್ಚೆ ನಡೆಯದಿದ್ದರೂ, ಪಕ್ಷದಲ್ಲಿ ಆಂತರಿಕವಾಗಿ ಈ ಕುರಿತು ಮಾತುಕತೆಗಳು ಪ್ರಾರಂಭವಾಗಿವೆ.
ಎರಡು ದಿನಗಳ ಹಿಂದೆ ಬಿಜಾಪುರದ ಬಹಿರಂಗ ಸಮಾವೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಎಂದು ಬಹಿರಂಗವಾಗಿ ಕರೆ ನೀಡಿದ್ದ ಯತ್ನಾಳ್, ಬಿಜೆಪಿಗೆ ಮರಳುವ ಸುಳಿವು ನೀಡಿದ್ದರು. ಈಗ ಆ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. (ಮೋದಿ ಬೆಂಬಲಿಸುವಂತೆ ಯತ್ನಾಳ್ ಕರೆ)
ಪಕ್ಷ ತೊರೆದವರನ್ನು ವಾಪಸ್ ಕರೆತರಬೇಕು ಎಂಬ ರಾಷ್ಟ್ರಮಟ್ಟದ ನಿರ್ಣಯದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆದುಕೊಳ್ಳುವ ಪ್ರಯತ್ನ ಈಗಾಗಲೇ ಆರಂಭಗೊಂಡಿದೆ. ಅದಕ್ಕಾಗಿ ಯತ್ನಾಳ್ ಅವರನ್ನು ಕರೆತರುವ ಪ್ರಕ್ರಿಯೆಯೂ ಆರಂಭವಾಗಿದೆ.
ಬಿಜೆಪಿಯಲ್ಲಿದ್ದ ಯತ್ನಾಳ್ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಅವರ ವಿರುದ್ಧ ಮುನಿಸಿಕೊಂಡು ಪಕ್ಷ ಬಿಟ್ಟಿದ್ದರು. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಯತ್ನಾಳ್ ಕರೆತರಲು ವೇದಿಕೆ ಸಿದ್ಧಗೊಂಡಿತ್ತು. (ಬಿಜೆಪಿಯಿಂದ ಯತ್ನಾಳ್ ಔಟ್)
ಆದರೆ, ಬಿಜಾಪುರ ಜಿಲ್ಲೆಯ ಸ್ಥಳೀಯ ಶಾಸಕರಾಗಿದ್ದ ಅಪ್ಪು ಪಟ್ಟಣಶೆಟ್ಟಿ ಅವರೊಂದಿಗಿನ ತಿಕ್ಕಾಟದ ಪರಿಣಾಮ ಬಿಜೆಪಿ ನಾಯಕರು ಆ ಪ್ರಯತ್ನವನ್ನು ನಿಲ್ಲಿಸಿದ್ದರು. ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಯತ್ನಾಳ್ ಸೋಲುಂಡಿದ್ದರು.
ಯತ್ನಾಳ್ ಅವರನ್ನು ಈಗ ಬಿಜೆಪಿಗೆ ಕರೆತಂದರೂ ಲೋಕಸಭೆ ಚುನಾವಣೆ ಟಿಕೆಟ್ ನೀಡುವುದಿಲ್ಲ ಎಂಬುದು ಪಕ್ಷ ಮೂಲಗಳು ಹೇಳಿವೆ. ಸೂಕ್ತ ಸಂದರ್ಭದಲ್ಲಿ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ನಾಯಕರು ಹೇಳಿದ್ದಾರೆ.












Click it and Unblock the Notifications