ವಿಧಾನಸಭೆ ಚುನಾವಣೆ; ಬೆಂಗಳೂರಲ್ಲಿ ಕಂಟ್ರೋಲ್ ರೂಂ ಸ್ಥಾಪನೆ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 24/7 ಕಾರ್ಯ ನಿರ್ವಹಣೆ ಮಾಡುವ ಕಂಟ್ರೋಲ್ ರೂಂ ಚುನಾವಣಾ ಆಯೋಗ ಸ್ಥಾಪನೆ ಮಾಡಿದೆ.
ಬೆಂಗಳೂರು, ಮಾರ್ಚ್ 19; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಕೇಂದ್ರ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಆಗಮಿಸಿ ಚುನಾವಣೆ ಸಿದ್ಧತೆಗಳ ಕುರಿತು ಮಾಹಿತಿ ಪಡೆದಿದೆ. ಏಪ್ರಿಲ್ 2ನೇ ವಾರದಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಚುನಾವಣಾ ಆಯೋಗ ಬೆಂಗಳೂರು ನಗರದಲ್ಲಿ ಚುನಾವಣಾ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಚುನಾವಣಾ ಅಕ್ರಮಗಳ ಕುರಿತು ಕಂಟ್ರೋಲ್ ರೂಂಗೆ ಕರೆ ಮಾಡಿ ಜನರು ಸಹ ದೂರು ಸಲ್ಲಿಕೆ ಮಾಡಬಹುದಾಗಿದೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಅಂಗವಾಗಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 24/7 ಕಾರ್ಯ ನಿರ್ವಹಣೆ ಮಾಡುವ ಕಂಟ್ರೋಲ್ ರೂಂ ಅನ್ನು ಯಲಹಂಕ, ಬ್ಯಾಟರಾಯನಪುರ , ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳ ನಿವಾರಣೆಗಾಗಿ ಸ್ಥಾಪನೆ ಮಾಡಲಾಗಿದೆ.

ಈ ಕಂಟ್ರೋಲ್ ರೂಂ ಬೆಂಗಳೂರಿನ ಕೆ. ಜಿ. ರಸ್ತೆ, ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ, ಎರಡನೇ ಮಹಡಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. 24/7 ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ/ ದೂರು ನಿವಾರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತದಾರರು/ ಸಾರ್ವಜನಿಕರು/ ಸಂಘ ಸಂಸ್ಥೆಗಳು ಹಾಗೂ ಇತರರು ಚುನಾವಣೆಗೆ ಸಂಬಂಧಿಸಿದಂತೆ ದೂರು/ ಕುಂದುಕೊರತೆಗಳನ್ನು ಕಂಟ್ರೋಲ್ ರೂಂ/ ದೂರು ನಿವಾರಣಾ ಕೇಂದ್ರದಲ್ಲಿನ ಸಹಾಯವಾಣಿಗೆ ಕರೆ ಮಾಡಿ ನೀಡಬಹುದು.
ದೂರು ನೀಡಲು ಸಹಾಯವಾಣಿ ಸಂಖ್ಯೆಗಳು 080-29915527/ 080-29915528 ಅಥವಾ ಇ-ಮೇಲ್ [email protected] ಮೂಲಕ ಸಲ್ಲಿಸಬಹುದು. ಕಛೇರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ Deputy Commissioner,Bengaluru Urban, ಇನ್ ಸ್ಟಾಗ್ರಾಮ್ dc_bangalore_urban, ಟ್ವಿಟರ್ DC_blrurban ಮೂಲಕ ಸಹ ದೂರು ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಮದ್ಯದ ಬಗ್ಗೆ ದೂರು ಕೊಡಿ; ಅಬಕಾರಿ ಉಪ ಆಯುಕ್ತರ ಕಛೇರಿ ವತಿಯಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಅಂಗವಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಇಂದಿರಾನಗರ, ಫ್ರೇಜರ್ ಟೌನ್, ಜೀವನಭೀಮಾನಗರ, ರಾಮೂರ್ತಿನಗರ, ಮಹದೇವಪುರ ಮತ್ತು ವೈಟ್ ಪೀಲ್ಡ್ ನಲ್ಲಿ ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸುವ ದೃಷ್ಟಿಯಿಂದ ಕಳ್ಳಭಟ್ಟಿ ಸಾರಾಯಿ, ನಕಲಿ ಮದ್ಯ ಹಾಗೂ ಅನಧಿಕೃತ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆಯತಂಹ ಅಕ್ರಮಗಳು ಕಂಡುಬಂದಲ್ಲಿ ದೂರು ನೀಡಲು ಮನವಿ ಮಾಡಲಾಗಿದೆ.
ಮತದಾರರು/ ಸಾರ್ವಜನಿಕರು/ ಸಂಘ ಸಂಸ್ಥೆಗಳು ಪತ್ರದ ಮೂಲಕ ಅಥವಾ ಇ-ಮೇಲ್ [email protected] ಅಥವಾ ದೂರವಾಣಿ ಸಂಖ್ಯೆ 1800-425-1232 ದೂರು/ ಮಾಹಿತಿ/ ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಉಪ ಆಯುಕ್ತರ ಕಛೇರಿ, ಬೆಂಗಳೂರು ನಗರ ಜಿಲ್ಲೆ5, # 542, 1ನೇ ಮಹಡಿ, 16 ನೇ ಕ್ರಾಸ್, ಇಂದಿರಾನಗರ 2ನೇ ಹಂತ, ಬೆಂಗಳೂರು 560038 ಅಥವಾ ದೂರವಾಣಿ ಸಂಖ್ಯೆ 080-25270034ಗೆ ಸಂಪರ್ಕಿಸಬಹುದು.
ಮಾದರಿ ನೀತಿ ಸಂಹಿತೆ ಜಾರಿಗೆ; ಮತದಾರರಿಗೆ ಹಂಚಲು ತಂದಿರುವ ಸೀರೆ, ಕುಕ್ಕರ್, ಗಡಿಯಾರ, ಮಿಕ್ಸಿ ಸೇರಿದಂತೆ ವಿವಿಧ ವಸ್ತುಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಇನ್ನೂ ಜಾರಿಗೆ ಬಂದಿಲ್ಲ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೊಷಣೆ ಮಾಡಿದ ತಕ್ಷಣದ ನೀತಿ ಸಂಹಿತೆ ಜಾರಿಗೆ ಬರುತ್ತದೆ ಅದು ಮತ ಎಣಿಕೆಗೊಂಡು ಫಲಿತಾಂಶ ಪ್ರಕಟಗೊಳ್ಳುವ ತನಕ ಜಾರಿಯಲ್ಲಿ ಇರುತ್ತದೆ. ಆಗ ಇನ್ನೂ ಕಠಿಣ ನಿಯಮಗಳು ಜಾರಿಗೆ ಬರಲಿವೆ.












Click it and Unblock the Notifications