Get Updates
Get notified of breaking news, exclusive insights, and must-see stories!

ಇಜ್ಞಾನ 15 ರ ಸಂಭ್ರಮದಲ್ಲಿ ವಿಜ್ಞಾನ-ತಂತ್ರಜ್ಞಾನ ಸಂವಾದ

ಬೆಂಗಳೂರು, ಮೇ 7: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಳ ಪ್ರಕಟಣೆಗೆ ಹೆಸರಾಗಿರುವ ಜಾಲತಾಣ 'ಇಜ್ಞಾನ' (www.ejnana.com) ಹದಿನೈದು ವರ್ಷಗಳನ್ನು ಪೂರೈಸಿದೆ. ಇಜ್ಞಾನ ಹದಿನೈದರ ಸಂಭ್ರಮದ ಅಂಗವಾಗಿ 'ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ' ಕುರಿತ ವಿಚಾರ ಸಂಕಿರಣವನ್ನುಬೆಂಗಳೂರಿನ ಸೌತ್ ಎಂಡ್ ಸಮೀಪವಿರುವ ಸುರಾನ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

"ಇಂಗ್ಲಿಷನ್ನು ಅವಕಾಶಗಳ ಭಾಷೆಯೆಂದು ಕರೆಯುತ್ತಾರೆ. ಕನ್ನಡದಲ್ಲೂ ಅವಕಾಶಗಳನ್ನು ಸೃಷ್ಟಿಸುವುದು, ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ನಮ್ಮ ಜವಾಬ್ದಾರಿ" ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಎಂ. ರಮೇಶ್ ಹೇಳಿದರು. ಸುರಾನ ಕಾಲೇಜಿನಲ್ಲಿ ನಡೆದ ಇಜ್ಞಾನ ಜಾಲತಾಣದ ಹದಿನೈದನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕನ್ನಡದ ವಿಜ್ಞಾನ-ತಂತ್ರಜ್ಞಾನ ಜಾಲತಾಣ 'ಇಜ್ಞಾನ' ನಡೆದು ಬಂದ ದಾರಿಯ ಕುರಿತು ಸಂಪಾದಕ ಟಿ. ಜಿ. ಶ್ರೀನಿಧಿ ಮಾತನಾಡಿದರು. ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಹೇಳುವುದಷ್ಟೇ ಅಲ್ಲ, ವಿಜ್ಞಾನ ಸಂವಹನದಲ್ಲೂ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಇಂಗ್ಲಿಷಿನಲ್ಲಿ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ, ಸರಳ ತಂತ್ರಾಂಶ ಸಾಧನಗಳ ನೆರವಿನಿಂದ ಕನ್ನಡದಲ್ಲಿ ರೂಪಿಸಲಾದ 'ಮೂಲವಸ್ತುಗಳು' ಎಂಬ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

Ejnana Kannada Science Website 15TH Anniversary at Surana College

ಕೊಳ್ಳೇಗಾಲ ಶರ್ಮ ಮಾತನಾಡಿ:

ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಮಾತನಾಡಿ, "ಭಾಷೆ ಎನ್ನುವುದು ವಿಜ್ಞಾನದ ಕಲ್ಪನೆಗಳನ್ನು ಗ್ರಹಿಸಲು ನಮಗೆ ನೆರವಾಗುವ ಮಾಧ್ಯಮ. ವಿಜ್ಞಾನದ ವಿಷಯಗಳನ್ನು ಇಂಗ್ಲಿಷಿನಲ್ಲಿ ಹೇಳಿದಷ್ಟೇ ಪರಿಣಾಮಕಾರಿಯಾಗಿ ನಮ್ಮ ಭಾಷೆಯಲ್ಲೂ ಹೇಳಬಹುದು. ಕನ್ನಡಕ್ಕೆ ವಿಜ್ಞಾನ ಕಲಿಸುವ ಸಾಮರ್ಥ್ಯ ಇದೆ, ಅದನ್ನು ನಾವು ಬಳಸಿಕೊಳ್ಳಬೇಕಿದೆ," ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಡೆದ 'ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ' ವಿಚಾರ ಸಂಕಿರಣದಲ್ಲಿ ಲೇಖಕ ಟಿ. ಎಸ್. ಗೋಪಾಲ್, ಡಾ. ಎಸ್. ಎಲ್. ಮಂಜುನಾಥ್, ಡಾ. ಎಲ್. ಜಿ. ಮೀರಾ, ಶ್ರೀಮತಿ ಎಂ. ಎಸ್. ಗಾಯತ್ರಿ ಹಾಗೂ ನಾರಾಯಣ ಬಾಬಾನಗರ ವಿಚಾರ ಮಂಡನೆ ಮಾಡಿದರು.

ಸುರಾನ ಕಾಲೇಜಿನ ಡಾ. ಭವಾನಿ ಎಂ. ಆರ್., ಡಾ. ವತ್ಸಲಾ ಮೋಹನ್, ಡಾ. ಸುಷ್ಮಾ, ಲೇಖಕ ಉದಯ ಶಂಕರ ಪುರಾಣಿಕ, ಇಜ್ಞಾನ ಟ್ರಸ್ಟ್‌ನ ಡಾ. ಎಚ್. ಆರ್. ಅಪ್ಪಣ್ಣಯ್ಯ, ಚೇತನ್ ಗುಪ್ತ, ಅಭಿಷೇಕ್ ಜಿ. ಎಸ್. ಮತ್ತಿತರರು ಉಪಸ್ಥಿತರಿದ್ದರು.

ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ:

ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ಜಾಲತಾಣವು 2007ರಿಂದ ಸಕ್ರಿಯವಾಗಿದ್ದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕನ್ನಡದ ಮಾಹಿತಿಯನ್ನು ಸತತವಾಗಿ ಪ್ರಕಟಿಸುತ್ತಾ ಬಂದಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಳವಾಗಿ, ಸುಲಭ ಶೈಲಿಯಲ್ಲಿ ಪ್ರಕಟಿಸುವ ಮೂಲಕ ಗಮನ ಸೆಳೆದಿರುವ ಇಜ್ಞಾನ ತಾಣವು ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿರುವ ಮಾಹಿತಿಯ ಕೊರತೆಯನ್ನು ತುಂಬಿಕೊಡುವ ಪ್ರಯತ್ನ ಮಾಡುತ್ತಿದೆ.

ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ವೈವಿಧ್ಯಮಯ ಲೇಖನ, ಪುಸ್ತಕ ಪರಿಚಯ, ಸಂದರ್ಶನ, ಪ್ರಶ್ನೋತ್ತರ ಇತ್ಯಾದಿಗಳನ್ನು ಪ್ರಕಟಿಸಿರುವ ಇಜ್ಞಾನ, ಬೆಂಗಳೂರಿನ ಕ್ವಿನ್‌ಟೈಪ್ ಟೆಕ್ನಾಲಜೀಸ್ ಸಂಸ್ಥೆಯ ನೆರವಿನಿಂದ 2019ರಲ್ಲಿ ತನ್ನ ವಿನೂತನ ಜಾಲತಾಣವನ್ನು ಅನಾವರಣಗೊಳಿಸಿತು.

ಜಾಲತಾಣದಲ್ಲಿ ಲೇಖನಗಳನ್ನು ಪ್ರಕಟಿಸುವುದರ ಜೊತೆಗೆ ಇಜ್ಞಾನದಿಂದ ಪುಸ್ತಕಗಳನ್ನೂ ಪ್ರಕಟಿಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಪ್ರಕಟವಾದ 300ಕ್ಕೂ ಹೆಚ್ಚು ಪುಟಗಳ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಇಜ್ಞಾನದ ಪ್ರಕಟಣೆಗಳ ಸಾಲಿನಲ್ಲಿ ಮುಖ್ಯವಾದದ್ದು. ಈ ಕೋಶದ ಸಿದ್ಧತೆ ಹಾಗೂ ಪ್ರಕಟಣೆಯ ಅನುಭವಗಳನ್ನು 2019ರಲ್ಲಿ ಕೋಲ್ಕತಾದಲ್ಲಿ ನಡೆದ 'ಇಂಡಿಯಾ ಇಂಟರ್‌ನ್ಯಾಶನಲ್ ಸೈನ್ಸ್ ಫೆಸ್ಟಿವಲ್' ವೇದಿಕೆಯಲ್ಲಿಯೂ ಪ್ರಸ್ತುತಪಡಿಸಲಾಗಿತ್ತು.

'ಟೆಕ್ ಲೋಕದ ಹತ್ತು ಹೊಸ ಮುಖಗಳು', 'ಪುಟ್ಟ ಪುಟ್ಟಿಯ ಪರಿಸರ ಪಾಠಗಳು' ಹಾಗೂ 'ಸ್ವಿಚ್ ಆಫ್' - ಇವು ಇಜ್ಞಾನದ ಇನ್ನಿತರ ಪ್ರಕಟಣೆಗಳು. ತನ್ನ ಕೆಲ ಪ್ರಕಟಣೆಗಳನ್ನು ಇ-ಬುಕ್ ಹಾಗೂ ಆಡಿಯೋಬುಕ್ ರೂಪದಲ್ಲೂ ಪ್ರಕಟಿಸಿರುವ ಇಜ್ಞಾನ, ಮುದ್ರಿತ ಪ್ರತಿಗಳನ್ನು ತನ್ನ 'ಕಲಿಕೆಗೆ ಕೊಡುಗೆ' ಕಾರ್ಯಕ್ರಮದಡಿ ರಾಜ್ಯದ ವಿವಿಧೆಡೆಗಳಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸುತ್ತಿದೆ.

ನಾವು ದಿನನಿತ್ಯವೂ ಬಳಸುವ ಕೆಲ ಸರಳ ಹಾಗೂ ಉಚಿತ ತಂತ್ರಾಂಶ ಸಾಧನಗಳನ್ನು ಬಳಸಿಕೊಂಡು ಸಣ್ಣಸಣ್ಣ ವಿಜ್ಞಾನ ಬರಹಗಳನ್ನು ಸ್ವಯಂಚಾಲಿತವಾಗಿ ತಯಾರಿಸುವ ಪ್ರಯೋಗ ನಡೆಸಿದ್ದು ಇಜ್ಞಾನದ ಹಾದಿಯ ಮೈಲಿಗಲ್ಲುಗಳಲ್ಲೊಂದು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೆರವಿನೊಡನೆ ಕಳೆದ ವರ್ಷ (2021) ಈ ಪ್ರಯೋಗವನ್ನು ನಡೆಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+