E-Khata: ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್: ಒಂದೇ ಎ-ಖಾತಾದಿಂದ ಪ್ರತ್ಯೇಕ ಖಾತಾ ಪಡೆಯಲು ಅವಕಾಶ!
ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಎ-ಖಾತಾದಲ್ಲಿ ಜಂಟಿಯಾಗಿ ಆಸ್ತಿ ಹೊಂದಿರುವವರಿಗೆ ರಾಜ್ಯ ಸರ್ಕಾರ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಜಂಟಿ ಮಾಲೀಕರು ತಮ್ಮ ಪಾಲಿನ ಆಸ್ತಿಯನ್ನು ಪ್ರತ್ಯೇಕವಾಗಿ ವಿಭಾಗಿಸಿಕೊಂಡು, ಪ್ರತ್ಯೇಕ ಎ-ಖಾತಾ ಪಡೆಯಬಹುದು. ಇದಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಐದು ಬೆಂಗಳೂರು ನಗರ ಪಾಲಿಕೆಗಳು ಇ-ಆಸ್ತಿ 2.0 ಪೋರ್ಟಲ್‌ನಲ್ಲಿ 'ಪ್ಲಾಟ್ ಸಬ್‌ಡಿವಿಷನ್' ಸೇವೆಯನ್ನು ಆರಂಭಿಸಿವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶನಿವಾರ ಈ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಒಂದೇ ಎ-ಖಾತಾದಲ್ಲಿ ಹಲವು ಮಂದಿ ಜಂಟಿಯಾಗಿ ಆಸ್ತಿ ಹೊಂದಿದ್ದಾರೆ. ಇವರು ಸಹೋದರರು, ಸಹೋದರಿಯರು, ವಾರಸುದಾರರು, ಸಂಬಂಧಿಕರು ಅಥವಾ ಕುಟುಂಬಕ್ಕೆ ಸೇರದ ಇತರ ಜಂಟಿ ಮಾಲೀಕರಾಗಿರಬಹುದು. ಇಂತಹ ಮಾಲೀಕರು ತಮ್ಮ ಪಾಲಿನ ಆಸ್ತಿಯನ್ನು ಪ್ರತ್ಯೇಕಿಸಿಕೊಂಡು ತಮ್ಮ ಹೆಸರಿನಲ್ಲಿ ಪ್ರತ್ಯೇಕ ಎ-ಖಾತಾ ಪಡೆಯಲು ಈ ಸೇವೆ ನೆರವಾಗಲಿದೆ ಎಂದು ಹೇಳಿದರು.

ಆಸ್ತಿ ಮಾರಾಟ, ಉಡುಗೊರೆ ಮತ್ತು ಸಾಲ ಪಡೆಯಲು ಅನುಕೂಲ
ಈ ಹೊಸ ವ್ಯವಸ್ಥೆಯಿಂದ ಜಂಟಿ ಆಸ್ತಿ ಮಾಲೀಕರಿಗೆ ಹಲವು ಪ್ರಯೋಜನಗಳಿವೆ. ತಮ್ಮ ಪಾಲಿನ ಆಸ್ತಿಯನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು, ಉಡುಗೊರೆಯಾಗಿ ವರ್ಗಾಯಿಸಲು ಅಥವಾ ಅಡಮಾನವಿಟ್ಟು ಸಾಲ ಪಡೆಯಲು ಅನುಕೂಲವಾಗಲಿದೆ. ಅಲ್ಲದೆ, ತಮ್ಮ ಪಾಲಿನ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯುವುದು ಹಾಗೂ ಪ್ರತ್ಯೇಕವಾಗಿ ಆಸ್ತಿ ತೆರಿಗೆ ಪಾವತಿಸುವುದೂ ಸುಲಭವಾಗಲಿದೆ.
ಈ ಹಿಂದೆ ಒಂದೇ ಖಾತಾದಲ್ಲಿ ಆಸ್ತಿ ಹೊಂದಿದ್ದವರು ತಮ್ಮ ಪಾಲಿನ ಆಸ್ತಿಗೆ ಪ್ರತ್ಯೇಕ ದಾಖಲೆ ಪಡೆಯಲು ಹಲವು ಪ್ರಕ್ರಿಯೆಗಳನ್ನು ಎದುರಿಸಬೇಕಾಗಿತ್ತು. ಇದೀಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ಈ ಸೌಲಭ್ಯ ಸಿಗಲಿದೆ?
ಈ ಸೇವೆಯನ್ನು ಪಡೆಯಲು ಕೆಲವು ಪ್ರಮುಖ ಷರತ್ತುಗಳನ್ನು ಪಾಲಿಸಬೇಕು.
- ಆಸ್ತಿಯು ಕಡ್ಡಾಯವಾಗಿ ಎ-ಖಾತಾ ಹೊಂದಿರಬೇಕು.
- ಎ-ಖಾತಾದಲ್ಲಿ ಪ್ರತಿಯೊಬ್ಬ ಜಂಟಿ ಮಾಲೀಕರ ಪಾಲು ಸ್ಪಷ್ಟವಾಗಿ ನಮೂದಾಗಿರಬೇಕು.
- 2,000 ಚದರ ಮೀಟರ್‌ವರೆಗಿನ ಖಾಲಿ ನಿವೇಶನ ಅಥವಾ ಕಟ್ಟಡವಿರುವ ನಿವೇಶನಗಳನ್ನು ಈ ವ್ಯವಸ್ಥೆಯಡಿ ವಿಭಾಗಿಸಬಹುದು.
- ಅಪಾರ್ಟ್‌ಮೆಂಟ್‌ಗಳ ಪ್ರತ್ಯೇಕ ಫ್ಲ್ಯಾಟ್ ಅಥವಾ ಘಟಕಗಳಿಗೆ ಸಂಬಂಧಿಸಿದ ಎ-ಖಾತಾಗಳನ್ನು ಈ ಸೌಲಭ್ಯದಡಿ ವಿಭಾಗಿಸಲು ಅವಕಾಶವಿಲ್ಲ.
- 2,000 ಚದರ ಮೀಟರ್‌ಗಿಂತ ದೊಡ್ಡ ನಿವೇಶನಗಳಿಗೆ ನಗರ ಯೋಜನಾ ವಿಭಾಗದ ಸಾಮಾನ್ಯ ಪ್ರಕ್ರಿಯೆಯ ಮೂಲಕ ಉಪವಿಭಾಗ ಮಾಡಿಸಿಕೊಳ್ಳಬೇಕು.
ಈ ಸೌಲಭ್ಯ ಪಡೆಯಲು ಜಂಟಿ ಮಾಲೀಕರು ಒಂದೇ ಕುಟುಂಬದವರಾಗಿರಬೇಕೆಂಬ ನಿಯಮವಿಲ್ಲ. ಆದರೆ ಎ-ಖಾತಾದಲ್ಲಿ ಪ್ರತಿಯೊಬ್ಬರ ಪಾಲು ಸ್ಪಷ್ಟವಾಗಿ ದಾಖಲಾಗಿರಬೇಕು.
ನಿವೇಶನ ವಿಭಾಗಕ್ಕೆ ಏನೇನು ನಿಯಮಗಳಿವೆ?
ಜಂಟಿ ಮಾಲೀಕತ್ವದ ನಿವೇಶನವನ್ನು ವಿಭಾಗಿಸಿದ ನಂತರ ರಚನೆಯಾಗುವ ಪ್ರತಿಯೊಂದು ನಿವೇಶನವು ನಿಗದಿತ ಮಾನದಂಡಗಳನ್ನು ಪೂರೈಸಬೇಕು.
* ನಿವೇಶನದ ವಿಸ್ತೀರ್ಣ: ಕನಿಷ್ಠ 50 ಚದರ ಮೀಟರ್‌ಗಿಂತ ಹೆಚ್ಚಿರಬೇಕು.
* ರಸ್ತೆ ಸಂಪರ್ಕದ ಅಗಲ: ಕನಿಷ್ಠ 6 ಮೀಟರ್ ಮುಂಭಾಗದ ರಸ್ತೆ ಸಂಪರ್ಕ ಇರಬೇಕು.
* ಪ್ರವೇಶ ವ್ಯವಸ್ಥೆ: ಸಾರ್ವಜನಿಕ ರಸ್ತೆಗೆ ನೇರ ಸಂಪರ್ಕ ಅಥವಾ ಸಾರ್ವಜನಿಕ ರಸ್ತೆಗೆ ಸಂಪರ್ಕ ಹೊಂದಿರುವ ಆಂತರಿಕ ರಸ್ತೆಯ ಮೂಲಕ ಪ್ರವೇಶ ಇರಬೇಕು.
* ಆಂತರಿಕ ರಸ್ತೆ: ಪ್ರತ್ಯೇಕ ನಿವೇಶನಕ್ಕೆ ಸಾರ್ವಜನಿಕ ರಸ್ತೆಗೆ ನೇರ ಸಂಪರ್ಕ ಇಲ್ಲದಿದ್ದರೆ, ಕನಿಷ್ಠ 3.5 ಮೀಟರ್ ಅಗಲದ ಆಂತರಿಕ ರಸ್ತೆ ಇರಬೇಕು.
ಎ-ಖಾತಾ ವಿಭಾಗಕ್ಕೆ ಎಷ್ಟು ಶುಲ್ಕ ಪಾವತಿಸಬೇಕು?
ಆಸ್ತಿಯ ಬಳಕೆ ಮತ್ತು ಮಾರ್ಗದರ್ಶಿ ಮೌಲ್ಯವನ್ನು (Guidance Value) ಆಧರಿಸಿ ಶುಲ್ಕ ವಿಧಿಸಲಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ವಸತಿ ಆಸ್ತಿಗಳಿಗೆ ಮಾರ್ಗದರ್ಶಿ ಮೌಲ್ಯದ ಶೇ. 2ರಷ್ಟು ಶುಲ್ಕ ಅನ್ವಯಿಸುತ್ತದೆ. ಕೈಗಾರಿಕಾ ಆಸ್ತಿಗಳಿಗೆ ಶೇ. 3ರಷ್ಟು ಶುಲ್ಕ ವಿಧಿಸಲಾಗುತ್ತದೆ. ವಸತಿಯೇತರ ಹಾಗೂ ಇತರ ಆಸ್ತಿಗಳಿಗೆ ಶೇ. 2ರಷ್ಟು ಶುಲ್ಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದಾಹರಣೆಗೆ, ವಸತಿ ನಿವೇಶನದ ಮಾರ್ಗದರ್ಶಿ ಮೌಲ್ಯ 1 ಕೋಟಿ ರೂ. ಇದ್ದರೆ, ಉಪವಿಭಾಗ ಪ್ರಕ್ರಿಯೆಗೆ 20,000 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಜಂಟಿ ಆಸ್ತಿಯ ಮಾಲೀಕರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
1. ವೆಬ್‌ಸೈಟ್‌ಗೆ ಭೇಟಿ ನೀಡಿ: [https://GBAeAasthi.karnataka.gov.in](https://GBAeAasthi.karnataka.gov.in)
2. ಪ್ರಸ್ತುತ ಎ-ಖಾತಾದ ಉಪವಿಭಾಗ ಅಥವಾ ವಿಭಜನೆಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿಕೊಳ್ಳಿ.
3. ಜಂಟಿ ಮಾಲೀಕರ ವಿವರಗಳನ್ನು ನಮೂದಿಸಿ.
4. ವಾಸ್ತುಶಿಲ್ಪಿ ಸಿದ್ಧಪಡಿಸಿದ ನಿವೇಶನದ ವಿಭಜನಾ ನಕ್ಷೆಯನ್ನು ಅಪ್‌ಲೋಡ್ ಮಾಡಿ.
5. ವಿಭಾಗಿಸಲಾಗುವ ಪ್ರತಿಯೊಂದು ನಿವೇಶನದ ವಿಸ್ತೀರ್ಣ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ.
6. ಅರ್ಜಿ ಅನುಮೋದನೆಯಾದ ಬಳಿಕ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ.


Click it and Unblock the Notifications
