Bengaluru: ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿಯ ಕುಟುಂಬಸ್ಥರ ಮೇಲೆ ಹಲ್ಲೆ
ಬೆಂಗಳೂರು ಏಪ್ರಿಲ್ 4: ಕೊರೊನಾ ಬಂದಾಗಿನಿಂದ ಜನರ ತಾಳ್ಮೆಯ ಶಕ್ತಿ ಮಾಯವಾದಂತೆ ಕಾಣಿಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಘಟನೆಗಳು ಎಲ್ಲೆಡೆ ವರದಿಯಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ತಾಳ್ಮೆ ಕಳೆದುಕೊಳ್ಳುವ ಹಲ್ಲೆ, ಕೊಲೆ, ದಾಳಿ ಮಾಡುವಂತ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಯೊಬ್ಬರ ಕುಟುಂಬದ ಸದಸ್ಯರ ಮೇಲೆ ಅಕ್ಕಪಕ್ಕದ ಟೆಕ್ಕಿಗಳು ಭಾನುವಾರ ಬೆಳ್ಳಂಬೆಳಗ್ಗೆ ತಾವು ನುಡಿಸುತ್ತಿದ್ದ ಸಂಗೀತವನ್ನು ಕಡಿಮೆ ಮಾಡುವಂತೆ ಕೇಳಿದ್ದಕ್ಕೆ ಹಲ್ಲೆ ನಡೆಸಿರುವ ಘಟನೆ ವಿಜ್ಞಾನನಗರದಲ್ಲಿ ನಡೆದಿದೆ.

26 ರಿಂದ 30 ವರ್ಷ ವಯಸ್ಸಿನವರಾದ ರಾಮ್ ಸಮಂತ್ ರೈ, ಬಸುದೇವ್ ಸಮಂತ್ ರಾಯ್ ಮತ್ತು ಅಭಿಷೇಕ್ ಸಿಂಗ್ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ. ಇವರು ಮೂಲತ: ಒಡಿಶಾದವರು ಎಂದು ತಿಳಿದು ಬಂದಿದೆ. ಇವರು ಕರ್ನಲ್ ಡೇವಿಡ್ ನೆಹೆಮಿಯಾ ಅವರ ಸಹೋದರ ಲಾಯ್ಡ್ ನೆಹೆಮಿಯಾ (54) ಅವರ ಸಹೋದರಿ ಮತ್ತು ಇತರ ಇಬ್ಬರು ನೆರೆಹೊರೆಯವರ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ನಂತರ, ಕರ್ನಲ್ ಅವರ ಅಸ್ವಸ್ಥ ತಾಯಿಯ ಆರೋಗ್ಯ ಹದಗೆಟ್ಟಿತು ಮತ್ತು ಐಸಿಯುಗೆ ದಾಖಲಿಸಲಾಗಿದೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ.
ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಥಳಿತ
ಘಟನೆಯ ಬಳಿಕ ಮಾತನಾಡಿದ ಲಾಯ್ಡ್ ನೆಹೆಮಿಯಾ ಅವರು ಟೆಕ್ಕಿಗಳ ಬಾಡಿಗೆ ಮನೆಯ ಎದುರು ಅವರ ಮನೆ ಇದೆ ಎಂದು ಹೇಳಿದರು. "ನನ್ನ ವಯಸ್ಸಾದ ತಾಯಿ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಕಡಿಮೆ ಧ್ವನಿಯಲ್ಲಿ ಹಾಡುಗಳನ್ನು ಕೇಳಲು ನಾನು ಮೂರು ಬಾರಿ ವಿನಂತಿಸಿದ್ದೆ" ಎಂದು ಲಾಯ್ಡ್ ಅವರು ಹೇಳಿದರು.
ಮುಂಜಾನೆ 4.30ಕ್ಕೆ ಆರೋಪಿಗಳು ಕುಡಿದು ಮನೆಗೆ ಹಿಂದಿರುಗಿದ ನಂತರ ಜೋರಾಗಿ ಹಾಡು ಹೇಳುತ್ತಿದ್ದರು. "ನನಗೆ ಮತ್ತು ನನ್ನ ತಾಯಿಗೆ ಜೋರಾದ ಶಬ್ದದ ಕಾರಣದಿಂದ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ, ನಾನು ತಾಳ್ಮೆಯಿಂದ ಹೊರಗೆ ಬಂದು ಸೌಂಡನ್ನು ಕಡಿಮೆ ಮಾಡಲು ವಿನಂತಿಸಿದೆ. ನಾನು ಅವರು ಬಾಡಿಗೆದಾರರಾಗಿರುವ ಮನೆಯ ಮಾಲೀಕರಿಗೆ ಸಂದೇಶವನ್ನು ಸಹ ಕಳುಹಿಸಿದೆ. ಪುರುಷರು ಹೊರಬಂದು ಗಲಾಟೆ ಮಾಡಲು ಪ್ರಾರಂಭಿಸಿದರು. ಕೆಟ್ಟದಾಗಿ ನಿಂದಿಸಲು ಪ್ರಾರಂಭಿಸಿದರು. ಬಳಿಕ ಅವರು ಮನೆಯಿಂದ ಹೊರಗೆ ಬಂದು ನಮ್ಮ ನಿಂದನೆ ಮಾಡಿದರು" ಎಂದು ಲಾಯ್ಡ್ ಹೇಳಿದ್ದಾರೆ. ಅವರ ಅಸಭ್ಯ ವರ್ತನೆಯಿಂದ ಕೋಪಗೊಂಡ ಲಾಯ್ಡ್ ರಸ್ತೆಯ ಮೇಲೆ ನಿಂತರು.

ಕುಡಿದ ಮತ್ತಿನಲ್ಲಿ ನೆರೆಹೊರೆಯವರಿಗೆ ಥಳಿತ
"ರಾಮ್ ಸಮಂತ್ ನನ್ನನ್ನು ತಳ್ಳಲು ಪ್ರಾರಂಭಿಸಿದರು. ನಂತರ ಅವರು ನನಗೆ ಹೊಡೆಯಲು ಪ್ರಾರಂಭಿಸಿದರು. ನನ್ನನ್ನು ನೆಲಕ್ಕೆ ತಳ್ಳಲಾಯಿತು. ನನ್ನ ಸಹೋದರಿ ಹೊರಗೆ ಬಂದು ಅವರನ್ನು ಬಿಡುವಂತೆ ಕೇಳಿದಾಗ, ಇತರ ಆರೋಪಿಗಳು ಅವಳಿಗೆ ಕಪಾಳಮೋಕ್ಷ ಮಾಡಿದ್ದಾರೆ'' ಎಂದು ಲಾಯ್ಡ ಆರೋಪಿಸಿದ್ದಾರೆ.
''ಕೆಲವು ನೆರೆಹೊರೆಯವರು ನಮಗೆ ಸಹಾಯ ಮಾಡಲು ಬಂದರು ಆದರೆ ಅವರಿಗೂ ಅವರು ಹೊಡೆದಿದ್ದಾರೆ "ಎಂದು ಲಾಯ್ಡ ಅವರು ಆರೋಪಿಸಿದರು.

ಹೋರಾಟದ ಬಗ್ಗೆ ಎಚ್ಚೆತ್ತ ಹೊಯ್ಸಳ ತಂಡ ಆಗಮಿಸಿತು. ಪೊಲೀಸರು ಲಾಯ್ಡ್ ಮತ್ತು ಅವರ ಸಹೋದರಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವರಿಂದ ದೂರು ಪಡೆದರು. ಎಫ್‌ಐಆರ್ ದಾಖಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆಗೆ ಸಿಸಿಟಿವಿ ದೃಶ್ಯಗಳನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಠಾಣೆಗೆ ಕರೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications