ಡಾ. ರಾಜ್ ಕಂಚಿನ ಪ್ರತಿಮೆ ಜಯನಗರದಲ್ಲಿ ಅನಾವರಣ
ಬೆಂಗಳೂರು, ಜ.30 : ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಸ್ಥಾಪಿಸಿಲಾಗಿದ್ದು, ಗುರುವಾರ ಪ್ರತಿಮೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅನಾವರಣಗೊಳಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಡಾ.ರಾಜ್ ಅವರ 14.7 ಅಡಿ ಪ್ರತಿಮೆಯನ್ನು ಸ್ಥಾಪಿಸಿದೆ.
ಗುರುವಾರ ಬೆಳಗ್ಗೆ ಸೌತ್ ಎಂಡ್ ಸರ್ಕಲ್ ಬಳಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಅನಂತ್ ಕುಮಾರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಬಿಬಿಎಂಪಿ ಆಯುಕ್ತ ಕಟ್ಟೆ ಸತ್ಯಾನಾರಾಯಣ, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಸಂಸದ ಅನಂತ್ ಕುಮಾರ್, ದೇಶದಲ್ಲಿ ಕರ್ನಾಟಕವನ್ನು ಜನ ಗುರುತಿಸುವವರು ಡಾ.ರಾಜ್ ಅವರ ಹೆಸರನ್ನು ಮೊದಲು ಹೇಳುತ್ತಾರೆ. ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ರಾಜ್ ಸಲ್ಲಿಸಿದ ಸೇವೆ ಅಗಾಧವಾದದ್ದು ಎಂದು ಹೇಳಿದರು. ನಾನು ಸಹ ರಾಜ್ ಅಭಿಯಾನಿ, ಅವರ ಚಿತ್ರಗಳನ್ನು ಮೊದಲ ದಿನದ ಮೊದಲ ಶೋನಲ್ಲೇ ನೋಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.
ಅಂಬರ ಚುಂಚನ ಗಡಿಯಾದ ಪಕ್ಕದಲ್ಲೇ ಡಾ.ರಾಜ್ ಪ್ರತಿಮೆ ಸ್ಥಾಪನೆ ಆಗಿರುವುದು ನಮಗೆ ಹೆಮ್ಮೆಯ ವಿಚಾರ. ಸಮಯ, ಸೂರ್ಯ, ಚಂದ್ರ ಅವರು ಇರುವವರೆಗೆ ಡಾ.ರಾಜ್ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ ಎಂಬುದನ್ನು ಇದು ಸಾಂಕೇತಿಸುತ್ತದೆ ಎಂದು ಅನಂತ್ ಕುಮಾರ್ ಹೇಳಿದರು. ಡಾ.ರಾಜ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಬೇಕು. ಈ ಕುರಿತು ಕರ್ನಾಟಕ ಸರ್ಕಾರ ಹಿಂದೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು. ಚಿತ್ರಗಳಲ್ಲಿ ನೋಡಿ ಡಾ.ರಾಜ್ ಪ್ರತಿಮೆ

ಸೌತ್ ಎಂಡ್ ಸರ್ಕಲ್ ನಲ್ಲಿದೆ ಪ್ರತಿಮೆ
ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಅಂಬರ ಚುಂಬನ ಗಡಿಯಾರ ಗೋಪುರದ ಪಕ್ಕದಲ್ಲಿ ಡಾ.ರಾಜ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. 14.7 ಅಡಿ ಎತ್ತರದ ಪ್ರತಿಮೆಯ ಕೆಳಭಾಗದಲ್ಲಿ ರಾಜ್ ಅಭಿನಯದ ಚಿತ್ರಗಳ ಮಾಹಿತಿ ಮತ್ತು ಅವರ ಕುರಿತು ಮಾಹಿತಿಗಳನ್ನು ನೀಡಲಾಗಿದೆ.

ಸ್ಥಾಪಿಸಿದ್ದು ಯಾರು?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದೆ. ಸ್ಥಳೀಯ ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಅವರು ಪ್ರತಿಮೆ ಸ್ಥಾಪಿಸಲು ಶ್ರಮವಹಿಸಿದ್ದಾರೆ. ಮೊದಲು ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಮೆ ಸ್ಥಾಪಿಸುವ ಕುರಿತು ಚಿಂತಿಸಲಾಗಿತ್ತು. ಅಲ್ಲಿ ಸ್ಥಳಾವಕಾಶದ ಕಾರಣದಿಂದಾಗಿ ಸೌತ್ ಎಂಡ್ ಸರ್ಕಲ್ ನಲ್ಲಿ ಸ್ಥಾಪಿಸಲಾಗಿದೆ.

ಅನಂತ್ ಕುಮಾರ್ ರಿಂದ ಅನಾವರಣ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಕಟ್ಟೆ ಸತ್ಯಾನಾರಾಯಣ, ಆಯುಕ್ತ ಲಕ್ಷ್ಮೀ ನಾರಾಯಣ, ಉಪ ಮೇಯರ್ ಇಂದಿರಾ, ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಸ್ತೂರಿ ನಿವಾಸ ಚಿತ್ರ ನೆನಪಿಸುವ ಪ್ರತಿಮೆ
ಡಾ.ರಾಜ್ ಅವರ ಕಸ್ತೂರಿ ನಿವಾಸ ಚಿತ್ರವನ್ನು ಪ್ರತಿಮೆ ನೆನಪಿಸುತ್ತದೆ. ಆ ಚಿತ್ರದಲ್ಲಿ ರಾಜ್ ನಿಂತಿರುವ ಭಂಗಿಯಲ್ಲಿಯೇ ಪ್ರತಿಮೆಯನ್ನು ಕೆತ್ತನೆ ಮಾಡಲಾಗಿದೆ. ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಪಾರಿವಾಳವೊಂದು ರಾಜ್ ಪ್ರತಿಮೆ ಮೇಲೆ ಬಂದು ಕೂತಿದ್ದು ವಿಶೇಷವಾಗಿತ್ತು.

ಬಂದು ಹೋದ ಪುನೀತ್ ರಾಜ್ ಕುಮಾರ್
ಡಾ.ರಾಜ್ ಪುತ್ರ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಾಣದ ಕಾರ್ಯಕ್ರಮಕ್ಕೆ ಮುಂಚಿತವಾಗಿ ಆಗಮಿಸಿ ನಂತರ ಚಿತ್ರೀಕರಣಕ್ಕೆ ತೆರಳಿದ್ದರು.












Click it and Unblock the Notifications