ಪರಿಷತ್ ಚುನಾವಣೆ ಕಣಕ್ಕಿಳಿದ ಡಾ.ಗುರುರಾಜ ಕರ್ಜಗಿ
ಬೆಂಗಳೂರು, ಜೂನ್ 2 : ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಡಾ.ಗುರುರಾಜ ಕರ್ಜಗಿ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಾಂತಿನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗುರುರಾಜ ಕರ್ಜಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. "ನನ್ನಲ್ಲಿ ಹಣ, ತೋಳ್ಬಲ ಇಲ್ಲ, ಕೇವಲ ಶಿಕ್ಷಕನಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ" ಎಂದು ಗುರುರಾಜ ಕರ್ಜಗಿ ಹೇಳಿದ್ದಾರೆ.

ಇಂದು ಶಿಕ್ಷಕರ ಕ್ಷೇತ್ರ ಕೆಟ್ಟು ಹೋಗಿದೆ. ಈ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತರುವ ಅಗತ್ಯವಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹಲವು ಹಿರಿಯ ಚಿಂತಕರು ಒತ್ತಾಯಿಸಿದರು. ಆದ್ದರಿಂದ ಹಿರಿಯರ ಆಶಯದಂತೆ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
"ನಾನು 40 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನಲ್ಲಿ ಹಣ, ತೋಳ್ಬಲ ಇಲ್ಲ. ಕೇವಲ ಒಬ್ಬ ಶಿಕ್ಷಕನಾಗಿ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೆ ಹಲವಾರು ಶಿಕ್ಷರು ಬೆಂಬಲ ನೀಡಿದ್ದಾರೆ ಎಂದು ಗುರುರಾಜ ಕರ್ಜಗಿ ತಿಳಿಸಿದರು. [ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಜೂನ್ 19ಕ್ಕೆ]
"ಈ ವಯಸ್ಸಿನಲ್ಲಿ ನನಗೆ ಯಾವುದೇ ರೀತಿಯ ಅಪೇಕ್ಷಗಳು ಇಲ್ಲ. ವೈಯಕ್ತಿಕ ಲಾಭದ ಉದ್ದೇಶವೂ ಇಲ್ಲ. ಒಬ್ಬ ಜನಪ್ರತಿನಿಧಿಯೂ ಮಾದರಿಯಾಗಿ ಬದುಕಬಹುದು ಎನ್ನುವುದನ್ನು ತೋರಿಸುವ ಆಶಯದೊಂದಿಗೆ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಜೂನ್ 20ಕ್ಕೆ ಚುನಾವಣೆ : ಜೂನ್ 20ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಂದ ರಾಜ್ಯ ವಿಧಾನಪರಿಷತ್ತಿಗೆ ಚುನಾವಣೆ ನಡೆಯಲಿದೆ. ಜೂ.3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಜೂ.6 ಕೊನೆಯ ದಿನವಾಗಿದೆ.












Click it and Unblock the Notifications