Kothanur Dinne lake: ಬೇಸಿಗೆಗೂ ಮುನ್ನವೇ ಕೊತ್ತನೂರು ಕೆರೆಯಲ್ಲಿ ಮೀನುಗಳ ಮಾರಣ ಹೋಮ
ಬೇಸಿಗೆಯಲ್ಲಿ ಕೆರೆ ದಡಗಳ ಮೇಲೆ ಓಡಾಡುವಾಗ ಮೀನುಗಳು ಸತ್ತು ಬಿದ್ದಿರುವುದು ಗಮನಿಸುತ್ತೇವೆ. ಆದರೆ, ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಮೀನುಗಳು ಮೃತಪಡುತ್ತಿವೆ.
ಬೆಂಗಳೂರು, ಫೆಬ್ರವರಿ. 08: ಬೇಸಿಗೆ ಆರಂಭವಾಗುವ ಮುನ್ನವೇ ಬೆಂಗಳೂರಿನ ಕೆರೆಗಳಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಕೆರೆಯ ಮೀನುಗಳು ಸಾವನ್ನಪ್ಪುತ್ತಿವೆ.
ನಗರದ ಕೊತ್ತನೂರು ದಿನ್ನೆ ಕೆರೆಯಲ್ಲಿ ಹಲವು ಮೀನುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೆರೆಗೆ ಕೊಳಚೆ ನೀರು ಬಿಡುತ್ತಿರುವುದೇ ಮೀನುಗಳು ಮೃತಪಡಲು ಕಾರಣ ಎನ್ನಲಾಗುತ್ತಿದೆ.
ಕೆರೆಗೆ ಕೊಳಚೆ ನೀರು ಬಿಡುತ್ತಿರುವುದೇ ಮೀನುಗಳ ಮಾರಣ ಹೋಮಕ್ಕೆ ಕಾರಣ ಎಂದು ನಗರದ ಕೆಕೆಗಳನ್ನು ಉಳಿಸಿ ಎಂದು ಹೋರಾಟ ಮಾಡುತ್ತಿರುವ ಹೋರಾಟಗಾರ ರಾಘವೇಂದ್ರ ಪಾಚ್ಚಾಪುರ ಶಂಕೆ ವ್ಯಕ್ತಪಡಿಸಿದ್ದಾರೆ.
"ನೀರಿನ ಒಳಹರಿವಿನಲ್ಲಿ ಒಳಚರಂಡಿ ಕಂಡುಬಂದಿದೆ. ಅಲ್ಲದೆ, ಇನ್ನೂ ಎರಡು ಒಳಹರಿವಿನಿಂದ ಕೆರೆಗೆ ಶುದ್ಧೀಕರಿಸದ ನೀರು ಸೇರುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ತಮ್ಮ ತಪ್ಪಿಲ್ಲ ಎಂದು ಹೇಳುತ್ತಿದೆ. ಇತ್ತ ಮತ್ತೊಂದೆಡೆ, ಕೆರೆಯ ನಿರ್ವಹಣೆ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ನುಣಿಚಿಕೊಳ್ಳುತ್ತಿದೆ ಎಂದು ರಾಘವೇಂದ್ರ ಪಾಚ್ಚಾಪುರ ಹೇಳಿದ್ದಾರೆ.

ಈ ಮಾಲಿನ್ಯದಿಂದಾಗಿ ಕೆರೆಯಲ್ಲಿ ಸಾರಜನಕದ ಅಂಶವು ಹೆಚ್ಚಾಗುತ್ತದೆ. ಇದರಿಮದ ಪಾಚಿ ಹೆಚ್ಚಾಗಿ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಆಮ್ಲಜನಕ ಸಿಗದೆ ಮೀನುಗಳು ಮೃತಪಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಬಿಬಿಎಂಪಿಯ ಲೇಕ್ ಎಂಜಿನಿಯರ್ ವಿಜಯಕುಮಾರ್ ಹರಿದಾಸ್, ಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು ಎಂದಿದ್ದಾರೆ.
"ಕೆರೆಯಲ್ಲಿ ಮೀನುಗಳ ಸಾವಿಗೆ ಸಂಬಂಧಿಸಿದ ಘಟನೆಯನ್ನು ಪರಿಶೀಲಿಸುವಂತೆ ನಾನು ಅಧಿಕಾರಿಗಳಿಗೆ ತಿಳಿಸುತ್ತೇನೆ. ಇಲ್ಲದಿದ್ದರೇ ನಾನೇ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ" ಎಂದು ತಿಳಿಸಿದ್ದಾರೆ.
ಘಟನೆಯ ಹೊಣೆಯನ್ನು ಹೊರದ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿಯ ಮೇಲೆ ಆರೋಪ ತಿರುಗಿಸುತ್ತಿದೆ. ಕೆರೆಯ ಕೆಲವು ಪ್ರದೇಶಗಳು ಇನ್ನೂ ಬಿಬಿಎಂಪಿಯ 110 ಗ್ರಾಮ ಘಟಕದ ಅಡಿಯಲ್ಲಿ ಒಳಚರಂಡಿ ಮಾರ್ಗದ ಸಂಪರ್ಕ ಹೊಂದಿವೆ. ಕೆರೆ ಸುತ್ತಲಿನ ಕೆಲವು ನಿವಾಸಿಗಳು ಸಹ ಕೆರೆಗೆ ತ್ಯಾಜ್ಯ ತಂದು ಸುರಿಯಬಹುದು ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಇಂಜಿನಿಯರ್ ಇನ್ ಚೀಫ್ ಎನ್ ಸುರೇಶ್ ಹೇಳಿದ್ದಾರೆ.
ಇನ್ನು ಕೆರೆಯನ್ನು ನೋಡಿಕೊಳ್ಳುವುದು ಲೇಕ್ ಡೆವಲಪ್‌ಮೆಂಟ್ ಅಥಾರಿಟಿ (ಎಲ್‌ಡಿಎ) ಜವಾಬ್ದಾರಿ ಎಂದು ತಿಳಿಸಿದ್ದಾರೆ. ಲೇಕ್ ಡೆವಲಪ್‌ಮೆಂಟ್ ಅಥಾರಿಟಿ ಕೆರೆನ್ನು ಪರಿಶೀಲಿಸಿ, ಮಾಲಿನ್ಯಕ್ಕೆ ಕಾರಣಗಳನ್ನು ಕಂಡು ಹಿಡಿಯಬೇಕು, ನಂತರ ಸೂಕ್ತ ಕ್ರಮ ಕೈಗೊಳ್ಳಲು ಏಜೆನ್ಸಿಗಳಿಗೆ ನಿರ್ದೇಶನ ನೀಡಬಹುದು ಎಂದಿದ್ದಾರೆ.












Click it and Unblock the Notifications