ಡಿ. ಜೆ. ಹಳ್ಳಿ ಗಲಭೆ; ಪಿ. ನವೀನ್ ಜಾಮೀನು ಅರ್ಜಿ ತಿರಸ್ಕಾರ
ಬೆಂಗಳೂರು, ಅಕ್ಟೋಬರ್ 06: ಬೆಂಗಳೂರಿನ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಪಿ. ನವೀನ್ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಗಲಭೆಯ ಎರಡು ಎಫ್‌ಐಆರ್ ಕುರಿತು ಎನ್‌ಐಎ ತನಿಖೆ ನಡೆಯುತ್ತಿದೆ.
ನವೀನ್ ಪರ ವಕೀಲರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯನ್ನು 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ನಡೆಸಿದರು. ಅರ್ಜಿಯಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.
ಈ ರೀತಿಯ ಪೋಸ್ಟ್ ಹಾಕುವುದನ್ನು ನವೀನ್ ಅಭ್ಯಾಸ ಮಾಡಿಕೊಂಡಿದ್ದಾರೆ. ನವೀನ್ ವಿರುದ್ಧ ಇರುವ ಆರೋಪಗಳು ಗಂಭೀರವಾದವು. ನವೀನ್ ತಪ್ಪನ್ನು ಮೇಲ್ನೋಟಕ್ಕೆ ಖಾತ್ರಿ ಪಡಿಸುತ್ತವೆ ಎಂದು ನ್ಯಾಯಾಧೀಶರು ಹೇಳಿದರು.

ನವೀನ್ ಪರ ವಕೀಲರು ವಾದ ಮಂಡಿಸಿ, ನವೀನ್ ವಿರುದ್ಧ ಇರುವ ಆರೋಪಗಳ ಸಾಕ್ಷ್ಯಗಳು ಡಿಜಿಟಲ್ ರೂಪದಲ್ಲಿವೆ. ಅವುಗಳನ್ನು ನಾಶಪಡಿಸಲು ಆಗುವುದಿಲ್ಲ. ಆದ್ದರಿಂದ, ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 400ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಕೆಲವು ಆರೋಪಿಗಳು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಆಗಸ್ಟ್ 11ರಂದು ರಾತ್ರಿ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ಪಿ. ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮೂವರು ಮೃತಪಟ್ಟಿದ್ದರು. ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.












Click it and Unblock the Notifications