ಬೆಂಗಳೂರು "ರಸ್ತೆ ಗುಂಡಿ" ಬಕಾಸುರನಿಗೆ ಕೋಟಿ ಕೋಟಿ ಸುರಿದ್ರೂ ಅದೇ ಕಥೆ
ಬೆಂಗಳೂರಿನಲ್ಲಿ ಪ್ರತಿ ಮಳೆಗಾಲದಲ್ಲೂ ರಸ್ತೆ ಗುಂಡಿ ಬಗ್ಗೆ ಚರ್ಚೆಯಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿಯ ಮಖ್ಯ ಆಯುಕ್ತರು ಗಡುವು ನಿಗದಿ ಮಾಡ್ತಾರೆ. ಆ ಗಡುವು ಮುಗಿದ ಮೇಲೆ ಸರ್ಕಾರ ಮತ್ತೊಂದು ಗಡುವು ನಿಗದಿ ಮಾಡುತ್ತೆ. ಇದೊಂದು ಸೀಸನ್‌ನಂತೆ ಪ್ರತಿ ವರ್ಷವೂ ಅದೇ ಕಥೆ. ಈ ನಡುವೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರವು ಪ್ರತಿ ವರ್ಷ ವಾರ್ಡ್ ವಾರು ಲಕ್ಷ ಲಕ್ಷ ರೂಪಾಯಿಯಂತೆ ಪ್ರತಿ ವರ್ಷ ಕೋಟಿಗಳಲ್ಲಿ ಹಣ ವ್ಯಯಿಸುತ್ತೆ. ಆದರೆ, ಬೆಂಗಳೂರು ಮಾತ್ರ ರಸ್ತೆ ಗುಂಡಿ ಮುಕ್ತವಾಗುತ್ತಿಲ್ಲ.
ವಾರ್ಡ್‌ವಾರು ಅನುದಾನವೇನಾಯ್ತು?
ಬೆಂಗಳೂರಿನಲ್ಲಿ ಪ್ರತಿ ವಾರ್ಡ್ ನಿರ್ವಹಣೆಗೂ ಇಂತಿಷ್ಟು ಹಣ ಎಂದು ನಿಗದಿ ಮಾಡಲಾಗಿದೆ. ಪ್ರತಿ ವರ್ಷವೂ ಲಕ್ಷ ಲಕ್ಷ ಹಣ ನಿಗದಿ ಮಾಡಿದರೂ, ವಾರ್ಡ್ ಮಟ್ಟದಲ್ಲೂ ರಸ್ತೆಗಳ ನಿರ್ಹವಣೆ ಹೇಳಿಕೊಳ್ಳುವ ಸ್ಥಿತಿಯಲ್ಲಿ ಏನೂ ಇಲ್ಲ. ಕಳೆದ ವರ್ಷ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್‌ಗೆ 15 ಲಕ್ಷ ರೂಪಾಯಿ ಮೀಸಲಿರಿಸಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್‌ಗಳಿಗೂ ಅನುದಾನ ಮೀಸಲಿರಿಸಲಾಗಿತ್ತು. ಒಟ್ಟು 33 ಕೋಟಿ ರೂಪಾಯಿ ಮೀಸಲಿರಿಸಲಾಗಿತ್ತು. ಪ್ರತಿ ವಾರ್ಡ್ ಗೂ 15 ಲಕ್ಷ ವೆಚ್ಚ ಮಾಡಿದರೂ ರಸ್ತೆ ಗುಂಡಿಗಳು ಕಡಿಮೆಯಾಗಿಲ್ಲ. ಅದಕ್ಕೂ ಹಿಂದಿನ ವರ್ಷ ಬರೋಬ್ಬರಿ 20 ಕೋಟಿ ಪ್ರತಿ ವಾರ್ಡ್‌ಗೂ ಮೀಸಲಿರಿಸಲಾಗಿತ್ತು. ಈ ಹಣವೆಲ್ಲ ಎಲ್ಲೋಯ್ತು, ಇಷ್ಟು ಖರ್ಚು ಮಾಡಿದರೂ ರಸ್ತೆ ಗುಂಡಿ ಯಾಕೆ ಇದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಮೂರು ವರ್ಷದಲ್ಲಿ ಖರ್ಚಾಗಿತ್ತು 119.23 ಕೋಟಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ( ಬಿಬಿಎಂಪಿ ವ್ಯಾಪ್ತಿಯಲ್ಲಿ) 2023ಕ್ಕೂ ಮೊದಲು ಅಂದರೆ, 2022,2021 ಹಾಗೂ 2020ನೇ ಅವಧಿಯಲ್ಲಿ ಬರೋಬ್ಬರಿ (ಮೂರು ವರ್ಷಗಳ ಅವಧಿಯಲ್ಲಿ) 119.23 ಕೋಟಿ ರೂಪಾಯಿ ಮೊತ್ತವನ್ನು ಕೇವಲ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಮಾತ್ರವೇ ಬಳಸಲಾಗಿದೆ. ಇದನ್ನು ಬೇರೆ ಯಾರೋ ಹೇಳಿದ್ದಲ್ಲ. ಕಳೆದ ವರ್ಷ ಪತ್ರಿಕಾಗೋಷ್ಠಿ ನಡೆಸಿದ್ದ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಅದೆಲ್ಲ ಸುಳ್ಳು ನಾವು ಮೂರು ವರ್ಷದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಉದ್ದೇಶಕ್ಕಾಗಿ ಕೇವಲ 119.23 ಕೋಟಿ ರೂಪಾಯಿ ಮಾತ್ರ ವೆಚ್ಚ ಮಾಡಿದ್ದೇವೆ. ಇಲ್ಲಿಯವರೆಗೆ 35 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಬಿಬಿಎಂಪಿಯಿಂದ ಮುಚ್ಚಲಾಗಿದೆ. ಈ ವರ್ಷ ಅಂದರೆ 2023ನೇ ಸಾಲಿನಲ್ಲಿ 36 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿ ಮುಚ್ಚಿಸಿ ಬಿಡ್ತೀವಿ ಎಂದಿದ್ರು. ಆದರೆ, ಅದೇ ಕಥೇ ಅದೇ ಹಾಡು ಎನ್ನುವಂತೆ ಇಂದಿಗೂ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಅದೇ ರೀತಿ ಉಳಿದಿವೆ.

ಮತ್ತೆ ಮತ್ತೆ ಗಡುವು, ರಸ್ತೆ ಗುಂಡಿ ಮಾತ್ರ ಕಡಿಮೆಯಾಗಿಲ್ಲ!
ಬೆಂಗಳೂರಿನಲ್ಲಿ ಮುಂದಿನ 15 ದಿನಗಳ ಅವಧಿಯಲ್ಲಿ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಇದು ಮೊದಲ ಗುಡುವು ಅಲ್ಲ, ಕೊನೆಯದೂ ಅಲ್ಲ ಎನ್ನುವಂತಾಗಿದೆ. ಪ್ರತಿ ಬಾರಿಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಗುಡುವು ಮುಂದುವರಿಯುತ್ತಿದೆಯಾದರೂ, ರಸ್ತೆ ಗುಂಡಿಗಳಿಂದ ಬೆಂಗಳೂರು ಮುಕ್ತವಾಗುತ್ತಿಲ್ಲ.












Click it and Unblock the Notifications