ಮಾಂಸಾಹಾರಕ್ಕಾಗಿ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಂಧಲೆಗೆ ಯತ್ನ
ಬೆಂಗಳೂರು, ಸೆಪ್ಟೆಂಬರ್ 01: ಮಾಂಸಾಹಾರದ ಊಟ ಬೇಕು ಎಂದು ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಂಧಲೆ ಮಾಡಲು ಪ್ರಯತ್ನ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
Recommended Video
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯಿಂದ ತಂದಿದ್ದ ಮಾಂಸಾಹಾರದ ಊಟವನ್ನು ಕೇಂದ್ರ ಒಳಗೆ ತರಲು ಸಿಬ್ಬಂದಿ ಒಪ್ಪಿಗೆ ಕೊಟ್ಟಿಲ್ಲ.
ಕೋವಿಡ್ ಕೇಂದ್ರದಲ್ಲಿ ಕೊಡುವ ಊಟವನ್ನು ಮಾಡಬೇಕು ಎಂದು ಸಿಬ್ಬಂದಿ ಕೋವಿಡ್ ಸೋಂಕಿತರಿಗೆ ಹೇಳಿದ್ದಾರೆ. ಇದರಿಂದಾಗಿ ದಾಂಧಲೆ ಮಾಡಲು ಪ್ರಯತ್ನ ನಡೆಸಲಾಗಿದೆ. ತಕ್ಷಣ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೋವಿಡ್ ಆರೈಕೆ ಕೇಂದ್ರದ ಒಳಗೆ ಹೋಗಲು ಪೊಲೀಸರಿಗೂ ಅವಕಾಶವಿಲ್ಲ. ಅವರು ಸೋಂಕಿತರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮನವೊಲಿಕೆ ಮಾಡಿದ್ದಾರೆ. ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದ ಸೋಂಕಿತರು ಪೊಲೀಸರ ಮಧ್ಯಪ್ರವೇಶದ ಬಳಿಕ ಸುಮ್ಮನಾಗಿದ್ದಾರೆ.
ಮಾಂಸಾಹಾರವಿಲ್ಲ : ಆರೈಕೆ ಕೇಂದ್ರಕ್ಕೆ ಬಂದ ದಿನದಿಂದ ಮಾಂಸಾಹಾರ ಸೇವಿಸಿಲ್ಲ. ಕೇಂದ್ರದಲ್ಲಿ ಪ್ರತಿದಿನ ಮೊಟ್ಟೆಯನ್ನು ನೀಡುತ್ತಿಲ್ಲ. ಆದ್ದರಿಂದ, ಮನೆಯಿಂದ ಮಾಂಸಾಹಾರ ತರಿಸಿಕೊಂಡಿದ್ದೇವೆ ಎಂದು ಕೆಲವು ಸೋಂಕಿತರು ಹೇಳಿದ್ದಾರೆ.
ಕೋವಿಡ್ ಕೇಂದ್ರದಲ್ಲಿರುವ ರೋಗಿಗಳಿಗೆ ಹೊರಗಿನಿಂದ ತಂದ ಆಹಾರವನ್ನು ನೀಡುವುದಿಲ್ಲ. ರೋಗಿಗಳಿಗೆ ಮನೆಯಿಂದ ತಂದ ಆಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ. ಮನೆಯಿಂದ ಬಂದಿದ್ದ ಊಟವನ್ನು ವಾಪಸ್ ಕಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಮವಾರ 1862 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 37,116.












Click it and Unblock the Notifications