ರಸ್ತೆ ಗುಂಡಿ ಬೆನ್ನತ್ತಿದ ಡಿ.ಕೆ.ಶಿವಕುಮಾರ್; ರಾತ್ರಿ 2 ಗಂಟೆವರೆಗೆ ಸಿಟಿ ರೌಂಡ್ಸ್
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಗೆ ಬ್ರೇಕ್ ಹಾಕಲು ವಿಶೇಷ ಕಾಳಜಿ ತೋರಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ತಡರಾತ್ರಿವರೆಗೂ ಫುಲ್ ಸಿಟಿ ರೌಂಡ್ಸ್ ಮಾಡಿದ್ದಾರೆ. ಬೆಂಗಳೂರಿನ ಹಲವು ರಸ್ತೆಗಳಿಗೆ ಖುದ್ದು ಭೇಟಿ ನೀಡಿ ರಸ್ತೆ ಗುಂಡಿಗಳು ಮುಚ್ಚಿದ್ದ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.
ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚಲು 15 ದಿನಗಳ ಡೆಡ್‌ಲೈನ್ ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು ಫೀಲ್ಡಿಗಿಳಿದು ಗುಂಡಿ ಮುಚ್ಚುವ ಕೆಲಸದಲ್ಲಿ ನಿರತರಾಗಿದ್ದರು. ಆದಷ್ಟು ಬೇಗ ಗುಂಡಿಗಳಿಗೆ ಮುಕ್ತಿ ನೀಡಬೇಕು. ಇದನ್ನು ನಾನೇ ಖುದ್ದು ವೀಕ್ಷಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಮೊದಲೇ ಹೇಳಿದ್ದರು.

ಅದರಂತೆ ನಿನ್ನೆ ದಿಢೀರನೆ ಡಿ.ಕೆ.ಶಿವಕುಮಾರ್ ಅವರು ಫೀಲ್ಡಿಗಿಳಿದು ಗುಂಡಿಗಳನ್ನು ಪರಿಶೀಲಿಸಿದ್ದಾರೆ. ಅವರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಹ ನಿದ್ದೆಗೆಟ್ಟು ಸಿಟಿ ರೌಂಡ್ಸ್‌ಗೆ ಜೊತೆಯಾಗಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಾದ ಜೆಸಿ ರಸ್ತೆ, ಟ್ರಿನಿಟಿ ಜಂಕ್ಷನ್ ಹಾಗೂ ದೊಮ್ಮಲೂರು ಬ್ರಿಡ್ಜ್ ಬಳಿ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ.
ಕೆಲವು ರಸ್ತೆಗಳಲ್ಲಿ ತಾವೇ ಗಡಾರಿ ಮೂಲಕ ಗುಂಡಿಗೆ ಮುಚ್ಚಿದ್ದ ಡಾಂಬರನ್ನು ಅಗೆಯುವ ಪ್ರಯತ್ನವೂ ಮಾಡಿದ್ದಾರೆ. ಈ ಮೂಲಕ ಖುದ್ದು ರಸ್ತೆಯ ಗುಂಡಿ ಮುಚ್ಚಿರುವ ಗುಣಮಟ್ಟವನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೂರುವವನು ನಾನಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿ ಪರಿಶೀಲಿಸುವುದು ಈ ಭೇಟಿಯ ಉದ್ದೇಶ. ಜಾಗತಿಕ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಘನತೆಗೆ ಚ್ಯುತಿ ಬರದಂತೆ ಕಾಪಾಡುವುದೇ ನಮ್ಮ ಧ್ಯೇಯ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. 15 ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಕಣ್ಣಿಗೆ ಕಾಣಿಸಬಾರದು. ಎರಡು ವಾರಗಳ ನಂತರ ನಾನೇ ಖುದ್ದಾಗಿ ಇಡೀ ಬೆಂಗಳೂರು ನಗರವನ್ನು ಸುತ್ತಾಡಲಿ ಪ್ರತಿ ರಸ್ತೆಯನ್ನು ಪರಿಶೀಲಿಸುತ್ತೇನೆ ಎಂದಿದ್ದರು. ಬಳಿಕ ಡಿಕೆಶಿ ಅಮೇರಿಕಾಗೆ ಪ್ರವಾಸ ತೆರಳಿದ್ದರು.

ಡಿಸಿಎಂ ಆದೇಶದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ರಸ್ತೆಗಳಿಗಿಳಿದು, ಖುದ್ದು ಸ್ಥಳಕ್ಕೇ ಬಂದು ಹಗಲು ರಾತ್ರಿಯೆನ್ನದೆ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ, ರಸ್ತೆ ಗುಂಡಿ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ಪರಿಶೀಲಿಸಿದ್ದರು.
ಪ್ರವಾಸ ಮುಗಿಸಿ ವಾಪಸ್ ಬಂದಿದ್ದ ಅವರು, ಬೆಂಗಳೂರಿನಲ್ಲಿ ಎಷ್ಟು ರಸ್ತೆಗುಂಡಿಗಳಿವೆ? ಎನ್ನುವ ಮಾಹಿತಿ ನನ್ನ ಬಳಿ ಇದೆ. ಹಾಗಾಗಿ ಇವುಗಳನ್ನು ಮುಚ್ಚಲು ಅಭಿಯಾನದ ರೀತಿಯಲ್ಲಿ ಕೆಲಸ ಮಾಡಿದ್ದೇವೆ, ಇದು ನಮ್ಮ ಜವಾಬ್ದಾರಿ ಕೂಡ ಹೌದು. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ತಕ್ಷಣ ಅಧಿಕಾರಿಗಳು ಈ ರೀತಿ ಕಾರ್ಯಪ್ರವೃತ್ತರಾಗಿರುವುದನ್ನು ನಾನು ನೋಡಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಶ್ಲಾಘಿಸಿದ್ದರು.

ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ರಸ್ತೆ ಗುಂಡಿ ಮುಚ್ಚುವ ಕೆಲಸದಲ್ಲಿದ್ದಾರೆ. ಈ ವೇಳೆ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿತ್ತು. ಈ ಮಧ್ಯೆ ಮಳೆ ಕೂಡ ಅಡ್ಡಿಯಾಗಿದೆ. ನಾವು ಬದ್ಧತೆಯಿಂದ ಕೆಲಸ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಡಿಕೆಶಿ ಆದೇಶದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಮಾಯವಾಗಿವೆ ಎಂದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications