ಡಿ.ಕೆ ಶಿವಕುಮಾರ್ ಗುಡುಗು: ಬೆಂಗಳೂರಲ್ಲಿ ಬುಲ್ಡೋಜರ್ ಸದ್ದು, ಮನೆ ಮಟಾಷ್!
ಬೆಂಗಳೂರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು ಏಕಾಏಕಿ ಫೀಲ್ಡ್‌ಗೆ ಇಳಿದಿದ್ದು, ಬುಲ್ಡೋಜರ್ ಸದ್ದು ಜೋರಾಗಿದೆ. ಬೆಂಗಳೂರಲ್ಲಿ ಹಲವು ಮನೆಗಳನ್ನು ಪಾಲಿಕೆಯ ಅಧಿಕಾರಿಗಳು ಕೆಡವಿ ಬಿಸಾಕ್ತಿದ್ದಾರೆ. ಅದು ಯಾಕೆ ಎನ್ನುವ ವಿವರ ಇಲ್ಲಿದೆ.
ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿ ಮೇಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಫಸ್ಟ್ ಕ್ಲಾಸ್ ಕಾರ್ಯಾಚರಣೆಗೆ ಇಳಿದಿದೆ. ಇದರ ಭಾಗವಾಗಿ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಗುರುವಾರ ಬುಲ್ಡೋಜರ್‌ಗಳ ಸುದ್ದು ಕೇಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಆದೇಶಿಸಿರುತ್ತಾರೆ. ಅದರಂತೆ ಅಧಿಕಾರಿಗಳು ಸರ್ವೇ ನಡೆಸಿ ತೆರವು ಕಾರ್ಯಾಚರಣೆ ನಡೆಸಲಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಲ್ಲಿರುವ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳನ್ನು ಕೆಡವುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿಯ ಅಧಿಕಾರಿಗಳು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಭಾಗವಾಗಿ ಮಹದೇವಪುರ ವಲಯ ಹೊರಮಾವು ವ್ಯಾಪ್ತಿಯ ನಂಜಪ್ಪ ಗಾರ್ಡನ್ ಕಾರ್ಯಾಚರಣೆ ನಡೆದಿದೆ. ಪುಟ್ಟಪ್ಪ ಎಂಬ ಮಾಲೀಕರು 10 X 25 ರಷ್ಟು ಅಡಿಯಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿರುವ ನೆಲಮಡಿ ಹಾಗೂ 5 ಅಂತಸ್ತಿನ ಕಟ್ಟಡವು ಬಿರುಕು ಬಿಟ್ಟಿದ್ದು, ಇದನ್ನು ಹೊಡೆದು ಬಿಸಾಕಲಾಗ್ತಿದೆ.
ಇನ್ನು ಹೆಚ್.ಎ.ಎಲ್ ವಾರ್ಡ್ ಇಸ್ಲಾಂಪುರದಲ್ಲಿ ಶ್ರೀರಾಂ ಎಂಬ ಮಾಲೀಕರ ನೆಲಮಹಡಿ ಹಾಗೂ ಮೊದಲಹಡಿಯು ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ತೆಗೆದು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದೇ ರೀತಿ ಬೆಂಗಳೂರಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ಕಟ್ಟಡಗಳನ್ನು ಪಟ್ಟಿ ಮಾಡಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.
ಅನಧಿಕೃತ ಕಟ್ಟಡಗಳ ತೆರವಿಗೆ ವಾರ್ನಿಂಗ್: ಬೆಂಗಳೂರಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅನೇಕ ಕಟ್ಟಡಗಳು ಪಾಲಿಕೆ ಗಮನಕ್ಕೆ ಬಂದಿದ್ಯಂತೆ. ಅವುಗಳನ್ನು ಕೂಡಲೇ ಒಡೆದು ಹಾಕಲು ಆದೇಶ ನೀಡಲಾಗಿದೆ. ನಂಜಪ್ಪ ಗಾರ್ಡನ್ ಎನ್ನುವ ಪ್ರದೇಶದಲ್ಲಿ 10 x 25 ಅಡಿ ನಿವೇಶನದಲ್ಲಿ ನೆಲಮಹಡಿ ಜತೆಗೆ 5 ಮಹಡಿ ಕಟ್ಟಡ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಲಾಗುತ್ತೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಇನ್ನು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಈ ರೀತಿಯ ತಪ್ಪುಗಳು ನಡೆದರೆ, ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ನಮಗೆ ಸಂಪೂರ್ಣ ಅಧಿಕಾರವಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುವುದಕ್ಕೆ ಅಧಿಕಾರವಿದೆ. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್ ಡಿಎ ಕೆಲವು ತಿದ್ದುಪಡಿ ತಂದು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದಿದ್ದಾರೆ.
ಈ ಹಿಂದೆಯೂ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ 2020-21ರ ಸಮಯದಲ್ಲಿ ಅದನ್ನು ಹಿಂಪಡೆಯಲಾಗಿದೆ. ಇದೀಗ ಮತ್ತೆ ಆ ಅಧಿಕಾರ ಕೊಡ್ತೀವಿ. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಡ್ತೀವಿ. ಆಗ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಸೋಮವಾರದಿಂದ ಕಟ್ಟಡಗಳ ಸಮೀಕ್ಷೆ ಶುರು: ಬೆಂಗಳೂರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಸೋಮವಾರದಿಂದಲೇ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಯಲಿದೆ. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆ ಮಾಡ್ತೀವಿ. ಅಕ್ರಮ ಕಟ್ಟಡ ನಿರ್ಮಾಣ ತಡೆಯಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಮೂಲಕ ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಡಿ.ಕೆ ಶಿ ಹೇಳಿದ್ದಾರೆ.
ಬಿಎಂಆರ್ ಡಿಎ ಹಾಗೂ ಬಿಎಂಟಿಎಫ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಲಿದ್ದು, ಈ ಪ್ರದೇಶಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications