'ಕೋವಿಡ್ ಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ'
ಬೆಂಗಳೂರು, ಮೇ 30: ''ಕೋವಿಡ್ ಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಔಷಧಿ ಕಂಡು ಹಿಡಿಯುವವರೆಗೂ ನಾವು ಕೋವಿಡ್ ಜೊತೆ ಬದುಕುವುದು ಅನಿವಾರ್ಯ. ಲಾಕ್‌ಡೌನ್ ಬಹುತೇಕ ಸಡಿಲವಾದರೂ ಬಿಪಿ, ಡಯಾಬಿಟಿಸ್ ಸೇರಿದಂತೆ ಬೇರೆ ಸೋಂಕು ಇರುವವರು, ವಯಸ್ಸಾದವರು, ಮಕ್ಕಳು ಮುನ್ನೆಚ್ಚರಿಕೆ ವಹಿಸಬೇಕು'' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸೋಂಕು ಬಂದರೆ ಯಾರೂ ಆತಂಕ ಪಡೋ ಅಗತ್ಯ ಇಲ್ಲ. 14 ದಿನಗಳ ಬಳಿಕ ಪಾಸಿಟಿವ್ ಇರುವವರಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗಲಿದೆ. ಆತುರ ಪಟ್ಟು ನಾವು ಎಲ್ಲಾದಕ್ಕೂ ವಿನಾಯಿತಿ ಕೊಡುತ್ತಿಲ್ಲ. ಲಾಕ್‌ಡೌನ್ ಮಾಡೋದ್ರಿಂದ ಕೊರೊನಾ ಸಾಯಲ್ಲ. ಜನ ಜೀವನ ಅಸ್ತವ್ಯಸ್ಥ ಗೊಂಡಿತ್ತು'' ಎಂದು ಹೇಳಿದರು.
''ಯುವಕರು ಜೀವನ ಶೈಲಿ ಉತ್ತಮ ಗೊಳಿಸಿಕೊಳ್ಳಲಿ, ಪ್ರತಿಯೊಬ್ಬರು ಮನೆಯಿಂದ ಹೊರಗೆ ಬಂದಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ದೊಡ್ಡ ಪ್ರಮಾಣದಲ್ಲಿ ಗುಂಪು ಸೇರಬಾರದು. ಕೊರೊನಾವೈರಸ್‌ಕ್ಕಿಂತ ಭಯಾನಕ ವೈರಾಣುಗಳು ಈ ಹಿಂದೆ ಬಂದಿವೆ'' ಎಂದರು.

''ರಾಜೀವ್ ಗಾಂಧಿ ಆರೋಗ್ಯ ವಿವಿಯ ಬೆಳ್ಳಿಹಬ್ಬದ ಸಮಾರಂಭ ಕಾರ್ಯಕ್ರಮವನ್ನು ಪ್ರಧಾನಿಯವರೇ ಉದ್ಘಾಟನೆ ಮಾಡಬೇಕು ಅಂತ ಆಶಯ ಇತ್ತು. ಪ್ರಧಾನಿಯವರ ಕಚೇರಿಗೂ ಪತ್ರ ಬರೆದು ಅನುಮತಿ ಕೇಳಿದ್ದೇವು. ಬೆಳ್ಳಿಹಬ್ಬವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಕೊಂಡಿದ್ದಾರೆ. ದೆಹಲಿಯಿಂದಲೇ ವಿವಿಯ ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಜೂನ್ 1 ರಂದು ರಾಜೀವ್ ಗಾಂಧಿ ಬೆಳ್ಳಿಹಬ್ಬದ ಆಚರಣೆ ನಡೆಯಲಿದೆ'' ಎಂದು ಸುಧಾಕರ್ ಮಾಹಿತಿ ನೀಡಿದರು.












Click it and Unblock the Notifications