ಶಾಲೆಗಳಲ್ಲಿ 6 -12 ವರ್ಷದವರೆಗಿನ ಮಕ್ಕಳಿಗೆ ಲಸಿಕಾ ಅಭಿಯಾನ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 27 : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ 6 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಶಾಲೆಯಲ್ಲಿ ಅಭಿಯಾನ ರೀತಿಯಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
15 ರಿಂದ 18 ವಯೋಮಾನದವರು ಹಾಗೂ 60 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕಾ ಲಸಿಕೆಯನ್ನು ಹೆಚ್ಚಿಸುವ ಮೂಲಕ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ಕೋವಿಡ್ ಸ್ಥಿತಿಗತಿ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದದ ನಂತರ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.
ಇಂದಿನ ಸಭೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ವಿವರಣೆ ನೀಡಲಾಗಿದೆ. ಸದ್ಯಕ್ಕೆ ಕೋವಿಡ್ ನಿಯಂತ್ರಣದಲ್ಲಿದೆ. ಏಪ್ರಿಲ್ 9 ರ ನಂತರ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಕೋವಿಡ್ ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ. ಪ್ರತಿದಿನ 30 ಸಾವಿರ ಪರೀಕ್ಷೆ ಗಳನ್ನು ಮಾಡುವ ಗುರಿ ಇದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಶೇ.2 ರಷ್ಟು ರಾಂಡಮ್ ಪರೀಕ್ಷೆ, ಟೆಲಿ ಟ್ರ್ಯಾಕಿಂಗ್ ಮಾಡಲಾಗುವುದು. ಇನ್ನು ಕೋವಿಡ್ ಹೆಚ್ಚಾಗಿರುವ ವಿಶ್ವದ 8 ದೇಶಗಳಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿಯನ್ನು ನೀಡಿದ್ದಾರೆ.
ನಾಲ್ಕನೇ ಅಲೆ ಎದುರಿಸಲು ಆಸ್ಪತ್ರೆಗಳು ಸನ್ನದ್ಧ:
ಸರ್ಕಾರಿ ಆಸ್ಪತ್ರೆಗಳಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಬೆಡ್ ಗಳಿವೆ. ಆಕ್ಸಿಜನ್ ದಾಸ್ತಾನು ಸಾಕಷ್ಟಿದೆ. ಕೋವಿಡ್ ನಿಯಂತ್ರಣಕ್ಕೆ ಸಕಲ ಸನ್ನದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ:
ಲಸಿಕಾ ಅಭಿಯಾನ ಕೈಗೊಳ್ಳುವುದರ ಜೊತೆಗೆ ಟ್ರ್ಯಾಕ್, ಟ್ರೇಸ್, ಟ್ರೀಟ್, ಲಸಿಕೆ ಪಾಲಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯ ಪಾಲನೆ ಆಗಬೇಕು. ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ ಮುಂದುವೆರೆಯಬೇಕು:
ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ ಕೈಗೊಳ್ಳಲಾಗುವುದು. ಲಸಿಕೆ ಅಭಿಯಾನದ ಮೂಲಕ ಕೋವಿಡ್ 3 ನೆ ಅಲೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಲಸಿಕೆ ಅಭಿಯಾನ, ಮುಂಜಾಗ್ರತಾ ಕ್ರಮಗಳ ಜೊತೆಗೆ ಜನರ ಜೀವನದ ಆರ್ಥಿಕತೆಯೂ ಉತ್ತಮ ಸ್ಥಿತಿಯಲ್ಲಿ ಮುಂದುವರೆಯಬೇಕು. ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಇದು ಕೋವಿಡ್ ನ ಮೂರು ಅಲೆಗಳಿಂದ ಕಲಿತಿರುವ ಪಾಠವಾಗಿದೆ.

ರಾಜ್ಯದಲ್ಲಿ ಯಾವ ರೀತಿಯ ಕೋವಿಡ್ ನಿಯಂತ್ರಣ ಕ್ರಮಗಳು ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ಆಸ್ಪತ್ರೆಗಳಲ್ಲಿನ ರೋಗಿಗಳ ಪರೀಕ್ಷೆಯನ್ನು ನಡೆಸಿ, ಪಾಸಿಟಿವ್ ಪ್ರಕರಣಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು. ಆಕ್ಸಿಜನ್ ಘಟಕಗಳಲ್ಲಿ 1100 ಮೆ.ಟನ್ ಸಾಮರ್ಥ್ಯಕ್ಕೆ ಹೆಚ್ಚಿಸುವ ತೀರ್ಮಾನ ಮಾಡಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ಕೋವಿಡ್ ನಾಲ್ಕನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಸಕಲ ರೀತಿಯಲ್ಲಿ ಸನ್ನದ್ದವಾಗಿದೆ ಎಂಬುದನ್ನು ಎಳೆಎಳೆಯಾಗಿ ಸಿಎಂ ಬಿಚ್ಚಿಟ್ಟಿದ್ದಾರೆ. ಇನ್ನು ಜನ ತಮ್ಮ ಜೀವನ ನಡೆಸಲು ಪರಿತಪಿಸಿ ಈಗಷ್ಟೇ ಚೇತರಿಕೆಯನ್ನು ಕಾಣುತ್ತಿರುವುದರಿಂದ ಆರ್ಥಿಕತೆಯು ಮುಂದುವರೆಯ ಬೇಕು ಜೀವನವೂ ಉಳಿಯಬೇಕು. ಕೋವಿಡ್ ಜೊತೆ ಜೊತೆಗೆ ಜೀವನವನ್ನು ಸಾಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಡಬೇಕು ಎನ್ನುವ ಕಾರಣಕ್ಕಾಗಿಯೇ ಜನರಿಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.












Click it and Unblock the Notifications