ವೀರಶೈವರ ಆರೋಪಕ್ಕೆ ಆಂಜನೇಯ ತಿರುಗೇಟು
ಬೆಂಗಳೂರು, ಜೂ. 16 : ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ವೀರಶೈವ ಮಹಾಸಭಾ ಎಚ್ಚರಿಕೆ ನೀಡುವುದು ಸರಿಯಲ್ಲ. ಸಾಮಾಜಿಕ ನ್ಯಾಯವನ್ನು ಪಾಲಿಸಿಕೊಂಡು ಬರುತ್ತಿರುವ ಪಕ್ಷ ಕಾಂಗ್ರೆಸ್ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಸಚಿವ ಎಚ್.ಆಂಜನೇಯ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಲು ವೀರಶೈವ ಮಹಾಸಭಾ ಯಾರು? ಎಂದು ಪ್ರಶ್ನಿಸಿದರು. ಇಂತಹ ಬೆದರಿಕೆಗೆ ಪಕ್ಷ ಎಂದಿಗೂ ಹೆದರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿಲ್ಲ. ಪಕ್ಷ ಇಂತಹ ವರ್ತನೆಯನ್ನು ಮುಂದುವರೆಸಿದರೆ, ಸರ್ಕಾರ ಮತ್ತು ಪಕ್ಷದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿತ್ತು. [ಕಾಂಗ್ರೆಸ್ ವಿರುದ್ಧ ವೀರಶೈವ ಮಹಾಸಭಾ ಅಸಮಾಧಾನ]
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಆಂಜನೇಯ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಾತ್ರ ಎಲ್ಲ ವರ್ಗಗಳಿಗೂ ಅವಕಾಶ ನೀಡಿ ಸಾಮಾಜಿಕ ನ್ಯಾಯ ಪಾಲಿಸಿಕೊಂಡು ಬರಲಾಗುತ್ತಿದೆ. ಇಂತಹ ಸಮಯದಲ್ಲಿ ವೀರಶೈವ ಮಹಾಸಭಾ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಲು ವೀರಶೈವ ಮಹಾಸಭಾ ಯಾರು? ಎಂದು ಪ್ರಶ್ನಿಸಿದ್ದಾರೆ. ಸಚಿವರ ಈ ಹೇಳಿಕೆ ವೀರಶೈವ ಮಹಾಸಭಾ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪ, ಸದ್ಯ ತಮ್ಮ ಸಹೋದ್ಯೋಗಿ ಅಧ್ಯಕ್ಷರಾಗಿರುವ ಸಂಘಟನೆ ಬಗ್ಗೆ ಆಂಜನೇಯ ಅವರು ನೀಡುರುವ ಹೇಳಿಕೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.












Click it and Unblock the Notifications