K.R. Pura to Whitefield Metro : ನಮ್ಮ ಮೆಟ್ರೋಗೆ ಚೀನಾದಿಂದ 2 ರೈಲು ಪೂರೈಕೆ
ಬಿಎಂಆರ್ ಸಿಎಲ್‌ಗೆ ಮೆಟ್ರೋ ಕೋಚ್‌ಗಳನ್ನು ಪೂರೈಸುವುದಾಗಿ ಒಪ್ಪಂದ ಪಡೆದ ನಾಲ್ಕು ವರ್ಷಗಳ ಬಳಿಕ, ಚೀನಾ ಮೂಲದ ಕಂಪನಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಎಸ್‌ಸಿ) ಕಂಪನಿ ಈ ವರ್ಷದ ಆಗಸ್ಟ್ ಒಳಗಾಗಿ ಎರಡು ರೈಲುಗಳನ್ನು ಪೂರೈಸಲಿದೆ. ಕೆಆರ್ ಪುರ-ವೈಟ್‌ಫೀಲ್ಡ್ ನಡುವೆ ಈ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ನಮ್ಮ ಮೆಟ್ರೋ ಅಧಿಕಾರಿಳು ತಿಳಿಸಿದ್ದಾರೆ.
2019ರಲ್ಲಿ ಚೀನಾದ ಕಂಪನಿ ರೈಲುಗಳನ್ನು ಪೂರೈಸಲು 1,578 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ಭಾರತದಲ್ಲಿ ಉತ್ಪದಾನಾ ಘಟಕವನ್ನು ಸ್ಥಾಪನೆ ಮಾಡಲು ವಿಫಲವಾದ ಕಾರಣ, ನಿಗದಿತ ಸಮಯಕ್ಕೆ ರೈಲುಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಒಪ್ಪಂದದ ಪ್ರಕಾರ ಈ ಕಂಪನಿ ಕಂಪನಿಯು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಗೆ 216 ಮೆಟ್ರೋ ಕೋಚ್‌ಗಳನ್ನು ಪೂರೈಸಬೇಕಿದೆ.

ಕೋಚ್‌ಗಳ ಪೂರೈಕೆಯ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಈ ವರ್ಷದ ಆಗಸ್ಟ್ ವೇಳೆಗೆ 6 ಕೋಚ್‌ಗಳ ಎರಡು ರೈಲುಗಳನ್ನು ಪೂರೈಕೆ ಮಾಡಲಿದೆ. ಉಳಿದ ಕೋಚ್‌ಗಳನ್ನು ಹಂತ ಹಂತವಾಗಿ ಪೂರೈಕೆ ಮಾಡಲಿದೆ ಎಂದು" ಖಚಿತಪಡಿಸಿದ್ದಾರೆ.
ಹಲವು ಬಾರಿ ನೋಟಿಸ್ ಕೊಟ್ಟಿದ್ದ ಬಿಎಂಆರ್‌ಸಿಎಲ್
ನಿಗದಿತ ಸಮಯಕ್ಕೆ ಕೋಚ್‌ಗಳನ್ನು ಪೂರೈಕೆ ಮಾಡಲು ವಿಫಲವಾಗಿದ್ದಕ್ಕೆ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ಗೆ ಬಿಎಂಆರ್‌ಸಿಎಲ್ ಹಲವು ಬಾರಿ ನೋಟಿಸ್ ನೀಡಿತ್ತು ಮತ್ತು ಅದರ ಬ್ಯಾಂಕ್ ಗ್ಯಾರಂಟಿ 372 ಕೋಟಿಯನ್ನು ಎನ್‌ಕ್ಯಾಶ್ ಮಾಡುವುದಾಗಿ ಕೂಡ ಬೆದರಿಕೆ ಹಾಕಿತ್ತು.
ಚೀನಾ ಮೂಲದ ಕಂಪನಿಯು ಈಗ ಕೋಲ್ಕತ್ತಾ ಮೂಲದ ಟಿಟಾಗರ್ ವ್ಯಾಗನ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸೆಪ್ಟೆಂಬರ್‌ನಿಂದ ಉಳಿದ ಕೋಚ್‌ಗಳನ್ನು ಪೂರೈಸಲಿದೆ. "ಸಿಆರ್‌ಆರ್‌ಎಸ್‌ಸಿ ಕೋಚ್‌ಗಳನ್ನು ತಯಾರಿಸಲು ಭಾರತೀಯ ಕಂಪನಿಯೊಂದಿಗೆ ಎಂಒಯು ಮಾಡಿಕೊಂಡಿದೆ. ಸೆಪ್ಟೆಂಬರ್‌ನಿಂದ ಹೊಸ ಕೋಚ್‌ಗಳನ್ನು ಸ್ವೀಕರಿಸಲು ನಾವು ಕಾಯುತ್ತಿದ್ದೇವೆ, ಈ ಕೋಚ್‌ಗಳು ಆರ್.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿವೆ" ಎಂದು ಹೇಳಿದರು.
ಡಿಸೆಂಬರ್ ವೇಳೆಗೆ ಹಳದಿ ಮಾರ್ಗದಲ್ಲಿ ಓಡಾಟ
ಆರ್.ವಿ. ರಸ್ತೆ - ನಮ್ಮ ಮೆಟ್ರೋದ ಬೊಮ್ಮಸಂದ್ರ ಮಾರ್ಗದಲ್ಲಿ ಡಿಸೆಂಬರ್ 2023 ರ ವೇಳೆಗೆ ರೈಲುಗಳ ಓಡಾಟ ಆರಂಭವಾಗುವ ಸಾಧ್ಯತೆಯಿದೆ, ಇದು ಹಳದಿ ಮಾರ್ಗದ 19-ಕಿಮೀ ವಿಸ್ತಾರವಾಗಿದೆ, ಈ ಮಾರ್ಗ ಉದ್ಘಾಟನೆಯಾದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವ ಲಕ್ಷಾಂತರ ಟೆಕ್ಕಿಗಳಿಗೆ ಅನುಕೂಲವಾಗಲಿದೆ."
ಪೂರೈಕೆ ತಡವಾಗಲು ಕಾರಣಗಳೇನು?
ಅಧಿಕಾರಿಗಳ ಪ್ರಕಾರ, ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ 75 ಪ್ರತಿಶತ ಉತ್ಪಾದನೆಯು ಭಾರತದಲ್ಲಿ ನಡೆಯಬೇಕು ಎಂದು ಹೇಳುವ ನಿಯಮದಿಂದ ಚೀನಾ ಕಂಪನಿಯು ಪೂರೈಕೆ ತಡವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ಥಳೀಯ ತಯಾರಕರನ್ನು ಹುಡುಕಲು ಕಂಪನಿಯು ಹಲವು ಸವಾಲುಗಳನ್ನು ಎದುರಿಸಿತು. ಕೋವಿಡ್-19 ಸಾಂಕ್ರಾಮಿಕವು ಕೂಡ ಕೋಚ್‌ಗಳ ತಯಾರಿಕೆ ತಡವಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ನಿಯಮದ ಕಾರಣದಿಂದಾಗಿ ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕೋಲ್ಕತ್ತಾ ಮೂಲದ ಟಿಟಾಗಢ್ ವ್ಯಾಗನ್‌ಗಳೊಂದಿಗೆ ಕೋಚ್‌ಗಳನ್ನು ತಯಾರಿಸಲು ಮತ್ತು ಪೂರೈಸಲು ಅನಿವಾರ್ಯವಾಗಿ ಪಾಲುದಾರಿಕೆಯನ್ನು ಹೊಂದಬೇಕಾಯಿತು. ನಮ್ಮ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 342 ಕೋಚ್‌ಗಳ 57 ರೈಲುಗಳನ್ನು ನಿರ್ವಹಿಸುತ್ತದೆ.












Click it and Unblock the Notifications