ಈದ್ಗಾ ಮೈದಾನ ವಕ್ಫ್ ಮಂಡಳಿಯದ್ದು; ಬಿಬಿಎಂಪಿ ಮುಖ್ಯ ಆಯುಕ್ತ
ಬೆಂಗಳೂರು, ಜೂನ್22: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದಕ್ಕೆ ತೆರೆಬಿದ್ದಿದೆ. ಈದ್ಗಾ ಮೈದಾನ ತಮ್ಮ ಸುಪರ್ದಿಯಲ್ಲಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಆ ಮೂಲಕ ಬಿಬಿಎಂಪಿ ಮತ್ತು ವಕ್ಫ್ ಮಂಡಳಿಯ ಈದ್ಗಾ ಮೈದಾನಕ್ಕೆ ತೆರೆಬಿದ್ದಂತಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ 1974ರಲ್ಲಿ ಸಿಟಿ ಸರ್ವೆ ಪ್ರಕಾರ ನಮ್ಮ( ಬಿಬಿಎಂಪಿ) ಖಾತೆ ಇದೆ ಎಂದು ಉಲ್ಲೇಖವಾಗಿದೆ. ಮೇಲ್ನೋಟಕ್ಕೆ ಮೈದಾನದ ಸ್ವಾಮಿಥ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲ. ಖಾತಾ ಪ್ರಕಾರ ಮಾಲೀಕತ್ವ ನಮ್ಮದು ಇದೆ. ವಕ್ಫ್ ಬೋರ್ಡ್ ದಾಖಲೆ ಸಮೇತ ಖಾತೆ ಬದಲಾವಣೆಗೆ ಮನವಿ ಮಾಡಲಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟದಂತೆ ಮುಖ್ಯ ಆಯುಕ್ತರು ಮಾತನಾಡಿದ್ದಾರೆ.
ಹಿಂದೂ ಪರ ಸಂಘಟನೆಗಳು ಯೋಗ ದಿನಾಚರಣೆ ಸೇರಿದಂತೆ ಕೆಲವು ಸಾರ್ವಜನಿಕ ಆಚರಣೆಗೆ ಅನುಮತಿಯನ್ನು ಕೇಳಿದ್ದವು. ಆದರೆ ಕಾನೂನಿನ ಪ್ರಕಾರ ನಮಗೆ ಅನುಮತಿ ನೀಡಲು ಅವಕಾಶಗಳಿಲ್ಲ. ಹಿಂದೂ ಸಂಘಟನೆಗಳು ಬೇಕಾದಲ್ಲಿ ವಕ್ಫ್ ಮಂಡಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಮಕ್ಕಳು ಆಟಕ್ಕಾಗಿ ಬಳಕೆಯಾಗ್ತಿರುವ ಮೈದಾನ
ಈದ್ಗಾ ಮೈದಾನ ಬಿಬಿಎಂಪಿಯದ್ದೋ ಅಥವಾ ವಕ್ಫ್ ಮಂಡಳಿಯದ್ದೋ ಎನ್ನುವ ಗೊಂದಲ ಉಂಟಾಗಿತ್ತು. ಬಿಬಿಎಂಪಿ ಮತ್ತು ವಕ್ಫ್ ಮಂಡಳಿ ಮೈದಾನವನ್ನು ತಮ್ಮದೆಂದು ವಾದಿಸುತ್ತಿದ್ದವು. ಈ ಮೈದಾನದಲ್ಲಿ ವಾರ್ಷಿಕ ಎರಡು ಸಲ ಮುಸಲ್ಮಾನರು ಪ್ರಾರ್ಥನೆಯನ್ನು ಮಾಡುವುದಕ್ಕೆ ಬಳಸುತ್ತಾರೆ. ಇದನ್ನು ಹೊರತು ಪಡಿಸಿ ಮಕ್ಕಳು ಆಟವಾಡುವುದಕ್ಕೆ ಮೈದಾನ ಬಳಕೆಯಾಗುತ್ತಿದೆ. ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರೇ ಮೈದಾನ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಎನ್ನುತ್ತಿರುವುದರಿಂದ ವಿವಾದಕ್ಕೊಂದು ತೆರೆ ಬಿದ್ದಂತಾಗುತ್ತಿದೆ.

ವಕ್ಫ್ ಮಂಡಳಿಗೆ ಅರ್ಜಿಯನ್ನು ಸಲ್ಲಿಸಬೇಕು
ಈದ್ಗಾ ಮೈದಾನ ತನಗೆ ಸೇರಿದ್ದೆಂದು ಬಿಬಿಎಂಪಿ ವಾದಿಸಿತ್ತು. ಅದ್ಯಾವಾಗ ವಕ್ಫ್ ಮಂಡಳಿ ದಾಖಲೆಗಳನ್ನು ಸಲ್ಲಿಸಿತೋ ಆಗಲೇ ಬಿಬಿಎಂಪಿ ಥಂಡ ಹೊಡೆದಿದೆ. ತನ್ನಲ್ಲಿರುವ ಎಲ್ಲ ಕಡತಗಳನ್ನು ಹುಡುಕಿದರು ಈದ್ಗಾ ಮೈದಾನ ತನ್ನದೆಂದು ವಾದಿಸಲು ಒಂದೇ ಒಂದು ಸರಿಯಾದ ದಾಖಲೆಯು ಸಿಕ್ಕಿರಲಿಲ್ಲ. ಇದರಿಂದಾಗಿ ವಕ್ಫ್ ಮಂಡಳಿಗೆ ದಾಖಲೆ ಸಲ್ಲಿಸುವಂತೆ ನೊಟೀಸ್ ನೀಡಿತ್ತು. ವಕ್ಫ್ ಮಂಡಳಿ ದಾಖಲೆಯನ್ನು ಬಿಬಿಎಂಪಿಗೆ ನೀಡಿತ್ತು. ದಾಖಲೆಯನ್ನು ಪರಿಶೀಲಿಸಿ ಬಿಬಿಎಂಪಿ ಮೈದಾನ ತನ್ನ ಸುಪರ್ದಿಯಲ್ಲಿಲ್ಲ ಎಂದು ಒಪ್ಪಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ಬೇಕಾದಲ್ಲಿ ತನ್ನ ಬಳಿಯಲ್ಲಿ ಅರ್ಜಿ ಸಲ್ಲಿಸುವ ಬದಲು ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಲಿ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಖಾತೆ ಬದಲಾವಣೆ ಬಳಿಕವಷ್ಟೇ ಸ್ಪಷ್ಟನೆ
ಈದ್ಗಾ ಮೈದಾನ ವಿಚಾರ ಧಾರ್ಮಿಕ ಸೂಕ್ಷ್ಮತೆಯನ್ನು ಪಡೆದುಕೊಂಡಿತ್ತು. ಈದ್ಗಾ ಮೈದಾನ ವಿವಾದ ತಾರಕಕ್ಕೇರುತ್ತಿದ್ದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಮೈದಾನದ ಸುತ್ತಲು ಸಿಸಿಟಿವಿಯನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಮಕ್ಕಳ ಆಟವನ್ನು ಹೊರತಾಗಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶವಿರಲಿಲ್ಲ.ಇದೀಗ ಬಿಬಿಎಂಪಿ ಆಯುಕ್ತರೇ ವಕ್ಫ್ ಮಂಡಳಿ ಸೂಕ್ತ ದಾಖಲೆಗಳನ್ನು ಕೊಟ್ಟು ಖಾತೆಗೆ ಮಾಡಿಸಿಕೊಳ್ಳಲಿ ಎನ್ನುತ್ತಿರುವುದರಿಂದ ವಕ್ಫ್ ಮಂಡಳಿ ಈದ್ಗಾ ಮೈದಾನದ ಕುರಿತು ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ.

ಮೈದಾನ ಮತ್ತು ಪೊಲೀಸ್ ಭದ್ರತೆ ಪರಿಶೀಲನೆ
ಜೂನ್ 21 ರಂದು ಶಾಸಕ ಜಮೀರ್ ಅಹಮದ್ ಖಾನ್ ಈದ್ಗಾ ಮೈದಾನಕ್ಕೆ ದಿಢೀರ್ ಭೇಟಿಯನ್ನು ನೀಡಿದ್ದರು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಶಾಸಕ ಬಿ.ಝಡ್. ಜಮೀರ್ ಅಹಮದ್ ಖಾನ್ ನಾಲ್ಕನೇ ಸಲ ಪ್ರತಿನಿಧಿಸುತ್ತಿದ್ದಾರೆ. ವಾರ್ಡ್ ನಂಬರ್ 140 ವ್ಯಾಪ್ತಿಯಲ್ಲಿ ಈದ್ಗಾ ಮೈದಾನ ಬರಲಿದೆ. ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹಮದ್ ಖಾನ್‌ರವರು ವಿವಾದ ಉಂಟಾಗಿದ್ದ ಪ್ರದೇಶಕ್ಕೆ ದಿಢೀರ್ ಭೇಟಿ ಕೊಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಶಾಸಕ ಜಮೀರ್ ಭದ್ರತೆ ಬಗ್ಗೆ ಪೊಲೀಸ್ ಅಧಿಕಾರಿಗಳಿಂದಲೂ ಮಾಹಿತಿಯನ್ನು ಪಡೆದಿದ್ದರು. ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರು ಈದ್ಗಾ ಮೈದಾನ ವಕ್ಫ್ ಮಂಡಳಿ ಸೇರಿದ್ದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಗೊಂದಲ ನಿವಾರಣೆಯಾದಂತಾಗಿದೆ.












Click it and Unblock the Notifications