ಹಗರಣ ರಹಿತ ಸರ್ಕಾರ ನೀಡಿದ ಖ್ಯಾತಿ ದೇವೇಗೌಡರದ್ದು
ಬೆಂಗಳೂರು, ಜೂ.18:ದೇಶದಲ್ಲಿ ಹಗರಣ ರಹಿತವಾಗಿ ಆಡಳಿತ ನೀಡಿದ ಏಕೈಕ ಪ್ರಧಾನ ಮಂತ್ರಿ ಎಂದರೆ ಅದು ದೇವೇಗೌಡರು ಮಾತ್ರ. ದೊರೆತ ಕಡಿಮೆ ಅವಧಿಯಲ್ಲೂ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ ಎಂದು ಮಾಜಿ ಉಪಲೋಕಾಯುಕ್ತ ನ್ಯಾ. ಚಂದ್ರಶೇಖರಯ್ಯ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದಾರೆ.
ಮಿನುಗುವ ಚುಕ್ಕಿ ಕನ್ನಡ ದಿನಪತ್ರಿಕೆ ಎಚ್.ಡಿ. ದೇವೇಗೌಡರವರ 82ನೇ ಹುಟ್ಟುಹಬ್ಬದ ಅಂಗವಾಗಿ ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ 'ರೈತರತ್ನ ಹೆಚ್‌ಡಿ ದೇವೇಗೌಡ್ರು' ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಮ್ಮ ಆಡಳಿತದ ವೇಳೆಯಲ್ಲಿ ಉತ್ತಮ ಬಜೆಟ್ ತಯಾರಿಸಿ ದೇಶದ ಅಭಿವೃದ್ಧಿಗೆ ದೇವೇಗೌಡರು ಶ್ರಮಿಸಿದ್ದಾರೆ. ಸರ್ಕಾರ ಶುದ್ಧವಾಗಬೇಕಾದರೆ ಭ್ರಷ್ಟಾಚಾರ ತೊಲಗಬೇಕು. ಭ್ರಷ್ಟಾಚಾರ ವಿಮುಕ್ತ ಸರ್ಕಾರಕ್ಕೆ ನಾವು ಬೆಂಬಲ ನೀಡಬೇಕಿದೆ ಎಂದು ನ್ಯಾ. ಚಂದ್ರಶೇಖರಯ್ಯ ಹೇಳಿದರು.

ಮಾಜಿ ಶಾಸಕ ರಾಜಣ್ಣ ಮಾತನಾಡಿ ಬೆಂಗಳೂರಿನಲ್ಲಿ ಜಾಗಕ್ಕಾಗಿ ಸಾಕಷ್ಟು ಕಿತ್ತಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎಷ್ಟೇ ಗಲಾಟೆ ಆದರೂ ರಿಂಗ್ ರೋಡ್ ನಿರ್ಮಾಣಕ್ಕೆ ದೇವೇಗೌಡರು ಜಾಗ ನೀಡಿ ಬೆಂಗಳೂರಿಗರ ಸಾಕಷ್ಟು ಸಮಯವನ್ನು ಉಳಿಸಿದ್ದಾರೆ. ಯಾವ ಸಮಾಜಕ್ಕೂ ಅನ್ಯಾಯ ಮಾಡದೇ ಉತ್ತಮವಾಗಿ ಆಡಳಿತ ನೀಡಿದ್ದರು ಎಂದು ಅವರು ದೇವೇಗೌಡ ಆಡಳಿತವನ್ನು ಮೆಲುಕು ಹಾಕಿದರು.
ವಿಶ್ವ ಒಕ್ಕಲಿಗರ ಸಂಸ್ಥಾನ ಕೆಂಗೇರಿಯ ಕುಮಾರ್ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ ದೇವೇಗೌಡರ ರಾಜಕೀಯ ಜೀವನ ಶ್ರೇಷ್ಠವಾದದ್ದು. ಬೀಡಿ ಸಿಗರೇಟ್‌ನಂತಹ ದುಶ್ಚಟಗಳು ಇವರಲ್ಲಿ ಇಲ್ಲ. ರಾಜಕೀಯದಲ್ಲಿ ಇಂದು ದುಶ್ಚಟರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಗುಣಗಳಿಂದ ದೇವೇಗೌಡರು ಪ್ರಸಿದ್ದರಾಗಿದ್ದಾರೆ. ಇವರ ಗುಣಗಳನ್ನು ಇಂದಿನ ರಾಜಕೀಯ ನಾಯಕರು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ಬಿ.ಎಸ್.ರಾಮಕೃಷ್ಣ, ಕೆ.ಸಿ.ಶಿವಣ್ಣ , ಅಣ್ಣಪ್ಪ ಶೆಟ್ಟಿ, ಕಣದಹಳ್ಳಿ ಮಂಜಣ್ಣ, ರತನ್ ಸಿಂಗ್, ಜಿ.ಟಿ. ಇಂದಿರಾ ಧರ್ಮಪ್ಪ, ಲತಾ ಸುಕುಮರ್, ಅಶಾದೇವಿ, ಹುಚ್ಚೇಗೌಡ, ಎನ್.ರಾಜಣ್ಣ, ಕೆ.ವಿ.ಅಮರನಾಥ, ಹೆಚ್.ವಿ ರಮೇಶ್‌ಗೌಡ, ಕೆ.ಟಿ ಗೊವಿಂದೆಗೌಡ, ವೇದಾವತಿ ರಂಗಸ್ವಾಮಿ ಗೌಡ, ತಾ.ನ.ಪ್ರಭುದೇವ್, ಮುದ್ದುರಾಜ್ ಅವರಿಗೆ 'ರೈತರತ್ನ ದೇವೇಗೌಡ್ರು' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಆರ್.ಪ್ರಕಾಶ್. ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಮಿನುಗುವ ಚುಕ್ಕಿ ಪತ್ರಿಕೆಯ ಸಂಪಾದಕ ಆರ್.ರಾಜೇಂದ್ರ ಉಪಸ್ಥಿತರಿದ್ದರು.












Click it and Unblock the Notifications