ಬೆಂಗಳೂರು; 110 ಹಳ್ಳಿಗಳಿಗೆ 'ಕಾವೇರಿ' ಬರುವುದು ವಿಳಂಬ

ಬೆಂಗಳೂರು, ಜೂನ್ 02; ಬೆಂಗಳೂರು ನಗರದ ಕುಡಿಯುವ ನೀರಿಗೆ 'ಕಾವೇರಿ'ಯೇ ಆಧಾರ. ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕಾವೇರಿ-5ನೇ ಹಂತದ ಯೋಜನೆ ಇನ್ನೂ ವಿಳಂಬವಾಗಲಿದೆ. ಇದರಿಂದಾಗಿ 110 ಹಳ್ಳಿಗಳಿಗೆ ಪೈಪ್ ಲೈನ್ ಮೂಲಕ ಕಾವೇರಿ ನೀರು ಹರಿಯುವುದು ಕನಿಷ್ಠ ಮೂರು ತಿಂಗಳು ತಡವಾಗಲಿದೆ.

ಕಾವೇರಿ-5ನೇ ಹಂತದ ಯೋಜನೆ ಶೇ 75ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಕಾಮಗಾರಿಯ ಕಾರಣಕ್ಕೆ ಕಾವೇರಿ-5ನೇ ಹಂತದ ಪೈಪ್ ಅಳವಡಿಕೆ ಸೇರಿದಂತೆ ಮೂಲ ಸೌಕರ್ಯ ಕಾಮಗಾರಿ ವಿಳಂಬವಾಗಿದೆ. ಎನ್‌ಎಚ್‌ಎಐ ಕಾಮಗಾರಿ ಪೂರ್ಣಗೊಂಡ ಬಳಿಕ ಜಲಮಂಡಳಿ ತನ್ನ ಕಾಮಗಾರಿಗೆ ವೇಗ ನೀಡಲಿದೆ.

Cauvery Water For 110 Villages Stage 5th Project May Delayed

ಎನ್‌ಎಚ್‌ಎಐ ಯೋಜನೆ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ ಕಾವೇರಿ-5ನೇ ಹಂತದ ಯೋಜನೆಯ ನಕ್ಷೆ ಬದಲಾವಣೆ ಮಾಡಲಾಗಿದೆ. ಆದರೆ ಹೆದ್ದಾರಿಯಲ್ಲಿ ನಿರ್ಮಾಣವಾಗಬೇಕಿರುವ ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಜಲಮಂಡಳಿ ತನ್ನ ಕಾಮಗಾರಿಯನ್ನು ಮುಂದುವರೆಸಬೇಕು. ಇದಕ್ಕೆ ಸುಮಾರು 3 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈಗಾಗಲೇ ಕಾಮಗಾರಿ ವಿಳಂಬ; ಕಾವೇರಿ-5ನೇ ಹಂತದ ಯೋಜನೆಯ ಕಾಮಗಾರಿಯನ್ನು 2023ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿ ಪೈಪ್ ಲೈನ್ ಮೂಲಕ ಕಾವೇರಿ ನೀರು ಮನೆಗಳಿಗೆ ಒದಗಿಸಲು ಜಲಮಂಡಳಿ ಗುರಿ ಹಾಕಿಕೊಂಡಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಯೋಜನೆ ವಿಳಂಬವಾಯಿತು. ಈಗ ಮತ್ತೆ ಹೆದ್ದಾರಿ ಕಾಮಗಾರಿಯ ಕಾರಣ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡಬೇಕಿದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

Cauvery Water For 110 Villages Stage 5th Project May Delayed

ಬೆಂಗಳೂರು ನಗರದ ಹೊರವಲಯ 110 ಹಳ್ಳಿಗಳ ಪೈಕಿ 51 ಹಳ್ಳಿಗಳ ಜನರು ಎರಡು ವರ್ಷಗಳ ಹಿಂದೆಯೇ ಜಲಮಂಡಳಿಗೆ ಯೋಜನೆಗಾಗಿ ಹಣ ನೀಡಿದ್ದಾರೆ. ಆದರೆ ಪೈಪ್‌ ಮೂಲಕ ನೀರು ಬರುವ ದಿನಾಂಕ ವಿಸ್ತರಣೆಯಾಗುತ್ತಲೇ ಇರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ತಿಂಗಳು ಕಾಮಗಾರಿ ಮುಗಿಯುತ್ತದೆ ಎಂಬ ಮಾಹಿತಿಯನ್ನು ನಮಗೆ ನೀಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಬೆಂಗಳೂರು ಜಲಮಂಡಳಿ ಕಾವೇರಿ-5ನೇ ಹಂತದ ಯೋಜನೆ ಕೈಗೊಂಡಿದೆ. ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಈ ಯೋಜನೆಗೆ 5,500 ಕೋಟಿ ರೂ. ಸಾಲ ನೀಡಿದೆ. 2023ರ ಆಗಸ್ಟ್‌ನಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಜೈಕಾ ಸಾಲ ನೀಡುವಾಗ ಗಡುವು ಕೊಟ್ಟಿತ್ತು.

ಕಾವೇರಿ-5ನೇ ಹಂತದಡಿ ಕಾವೇರಿ ನದಿಯಿಂದ 775 ಎಂಎಲ್‌ಡಿ ನೀರು ತರಲು ಮತ್ತು ಒಳಚರಂಡಿ ಸಂಪರ್ಕ ವ್ಯವಸ್ಥೆಗಾಗಿ 4,940 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸಾಲ ಪಡೆಯುವಾಗ 2022ರ ಡಿಸೆಂಬರ್‌ನಲ್ಲಿಯೇ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಜೈಕಾಗೆ ಜಲಮಂಡಳಿ ಹೇಳಿತ್ತು.

225 ಚ. ಕಿ. ಮೀ. ವಿಸ್ತೀರ್ಣದ 110 ಹಳ್ಳಿಗಳಿಗೆ 2049ರ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. 80 ಕಿ. ಮೀ. ಮಾರ್ಗದಲ್ಲಿ 3000 ಎಂಎಂ ವ್ಯಾಸದ ಪೈಪ್ ಅಳವಡಿಕೆ ಮಾಡಿ, 7 ಕಡೆ ನೆಲಮಟ್ಟದ ಜಲಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗುತ್ತಿದೆ. ಶಿವ ಸಮತೋಲನ ಜಲಾಶಯದ ಮೂಲಕ ಪಡೆದ ನೀರನ್ನು ತೊರೆಕಾಡನಹಳ್ಳಿಯಲ್ಲಿ ಸಂಸ್ಕರಣೆ ಮಾಡಲಾಗುತ್ತದೆ.

ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ಪಂಪಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ತೊರೆಕಾಡನಹಳ್ಳಿ ಇಂದ ವಾಜರಹಳ್ಳಿ ತನಕ 30 ಎಂಎಂನ ಬೃಹತ್ ಕೊಳವೆ ಅಳವಡಿಕೆ ಮಾಡಿ, ಕಾವೇರಿ ನೀರು ಪಂಪ್ ಮಾಡಲಾಗುತ್ತಿದೆ. ಜಪಾನ್, ಆಸ್ಟ್ರಿಯಾ, ಅಮೆರಿಕದಿಂದ ಈ ಯೋಜನೆಗಾಗಿ ಅತ್ಯಾಧುನಿಕ ಪಂಪ್‌ ಸೆಟ್‌ ತರಲಾಗಿದೆ.

ಬೆಂಗಳೂರು ನಗರಕ್ಕೆ ಕಾವೇರಿ 1, 2,3 ಮತ್ತು 4ನೇ ಹಂತದ ಯೋಜನೆಗಳ ಮೂಲಕ ಸುಮಾರು 1450 ಎಂಎಲ್‌ಡಿ ನೀರು ಪೂರೈಕೆಯಾಗುತ್ತದೆ. ಆದರೆ ಜಲಮಂಡಳಿ ಅಧಿಕಾರಿಗಳ ಪ್ರಕಾರ ನಗರಕ್ಕೆ ಪ್ರತಿನಿತ್ಯ 775 ಎಂಎಲ್‌ಡಿ ನೀರಿನ ಕೊರತೆ ಇದೆ. ಕಾವೇರಿ-5ನೇ ಹಂತದ ಯೋಜನೆ ಪೂರ್ಣಗೊಂಡರೆ ನೀರಿನ ಕೊರತೆಗೆ ಮುಕ್ತಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+