ಕಾಂತರಾಜ ವರದಿಗೆ ವಿರೋಧವಿಲ್ಲ: ವರದಿ ಸರಿಪಡಿಸುವಂತೆ ಸರ್ಕಾರಕ್ಕೆ ಸಚಿವರ ಕೋರಿಕೆ
ಬೆಂಗಳೂರು, ಜನವರಿ 08: ಜಾತಿ ಗಣತಿಗೆ ಸಂಬಂಧಿಸಿದ ಡಾ.ಕಾಂತರಾಜು ವರದಿ ಸಂಬಂಧಿಸಿದಂತೆ ಪರ-ವಿರೋಧ, ವರದಿ ಸ್ವೀಕಾರ, ಜಾರಿ ಮಾಡದಂತೆ ಒತ್ತಾಯಗಳು ಕೇಳಿ ಬಂದಿದ್ದವು. ಒಕ್ಕಲಿಗ ಸಮುದಾಯದ ನಾಯಕರು ಈ ವರದಿ ಜಾರಿ ಮಾಡದಂತೆ ಮನವಿ ಪತ್ರ ಸಲ್ಲಿಸಿದ್ದರು. ಇದೀಗ ಆಯೋಗದ ವರದಿಗೆ ನಮ್ಮ ವಿರೋಧ ವಿಲ್ಲ, ಅದನ್ನು ಸರಿಪಡಿಸುವಂತೆ ಸಚಿವರೇ ಸರ್ಕಾರವನ್ನು ಕೋರಿದ್ದಾರೆ.
ಕಾಂತರಾಜು ವರದಿಗೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರೂ ಆದ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಸೋಮವಾರ ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದರು.
ವರದಿ ಸರಿಪಡಿಸಿದರೆ ಈ ಅನುಕೂಲ ಆಗಲಿದೆ
ಹಾಲಿ ನಿಯಮಗಳ ಪ್ರಕಾರ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರನ್ನು ನಮೂದಿಸಿದರೆ ಸಮುದಾಯದ ಉಪಪಂಗಡಗಳಿಗೆ ಸೇರಿದವರಿಗೆ ಮೀಸಲಾತಿ ಸಿಗುವುದಿಲ್ಲ. ಆದ್ದರಿಂದ, ಸಮುದಾಯಕ್ಕೆ ಸೇರಿದವರು ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡದ ಹೆಸರು ಹಾಕುತ್ತಿಲ್ಲ. ಇದನ್ನು ಸರಿಪಡಿಸಿದರೆ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರು ನಮೂದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಒಂದು ವೇಳೆ ಹೀಗಾಗದಿದ್ದರೆ ಸಹಜವಾಗಿಯೇ ಲಿಂಗಾಯತ ಸಮುದಾಯದ ಜನಸಂಖ್ಯೆ ಶೇಕಡಾ 22ರವರೆಗೆ ಹೆಚ್ಚಾಗುವ ಸಂಭವವಿದೆ ಎಂದು ಅವರು ವಿವರಿಸಿದರು.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು: ಇದು ಐತಿಹಾಸಿಕ ಸತ್ಯ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಬೆಳಗಾವಿ ಈ ಮುಂಚೆ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೌದು ಹೆಬ್ಬಾಳ್ಕರ್ ಅವರ ಹೇಳಿರುವುದು ಐತಿಹಾಸಿಕ ಸತ್ಯ. ಅದು ಎಲ್ಲರಿಗೂ ಗೊತ್ತಿರುವಂತದ್ದೇ. ಅದನ್ನು ಹೇಳುವುದು ತಪ್ಪೇನೂ ಅಲ್ಲ.
ಆದರೆ, ಮುಂಚೆ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಪ್ರದೇಶಗಳು ಪುನರ್ ವಿಂಗಡಣೆ ನಂತರ ಸಮಗ್ರ ಕರ್ನಾಟಕದ ಭಾಗವಾಗಿವೆ. ಅಂತಹ ಎಲ್ಲಾ ಪ್ರದೇಶಗಳು ಈಗ ಸಮಗ್ರ ಕರ್ನಾಟಕದಲ್ಲೇ ಇವೆ ಎಂದು ತಿಳಿಸಿದರು.
ಡಿಸಿಎಂ ಹುದ್ದೆ ಸೃಷ್ಟಿ: ಬಹಿರಂಗವಾಗಿ ಮಾತನಾಡಲ್ಲ
ಸರ್ಕಾರದಲ್ಲಿ ಇನ್ನೂ ಮೂವರು ಉಪಮುಖ್ಯಮಂತ್ರಿ ಹುದ್ದೆ ನೇಮಕಾತಿ ಬಗ್ಗೆ ನಾಣು ಬಹಿರಂಗವಾಗಿ, ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಈ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೇಳಿದರೆ, ಅದನ್ನು ನಾಯಕರ ಮುಂದೆ ನಾಲ್ಕು ಗೋಡೆಗಳ ಮಧ್ಯೆ ತಿಳಿಸುತ್ತೇನೆ ಎಂದು ತಿಳಿಸಿದರು.












Click it and Unblock the Notifications