ಸಿದ್ದರಾಮಯ್ಯ ಕಾರಿಗೆ ಸಾರಥಿಯಾದ ಬೈರತಿ ಸುರೇಶ್: ಅಹಿಂದ ನಾಯಕನಿಗೆ ಅದ್ದೂರಿ ಸ್ವಾಗತ
ಸೋಮವಾರ ಬೆಂಗಳೂರಿನಿಂದ ಶಾಸಕರಾಗಿ ತೆರಳಿದ್ದ ಸಿದ್ದರಾಮಯ್ಯ ಕರ್ನಾಟಕದ ಸಿಎಂ ಗುರುವಾರ ಬೆಂಗಳೂರಿಗೆ ವಾಪಸಾದರು. ಡಿಕೆಶಿ ವಿರುದ್ಧದ ಸ್ಪರ್ಧೆಯಲ್ಲಿ ಗೆದ್ದ ಅವರು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜೊತೆಯಾಗಿದ್ದು ಆಪ್ತ, ಹೆಬ್ಬಾಳ ಶಾಸಕ ಬೈರತಿ ಸುರೇಶ್.
ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಿಂದ ಅವರ ನಿವಾಸದವರೆಗೆ ಮತ್ತು ಕಾಂಗ್ರೆಸ್ ಕಚೇರಿವರೆಗೆ ಕಾರಿನ ಸಾರಥಿಯಾಗಿದ್ದು ಬೈರತಿ ಸುರೇಶ್. ವಿಮಾನ ನಿಲ್ದಾಣದಲ್ಲೇ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಅಪಾರ ಅಭಿಮಾನಿಗಳು ಸೇರಿದ್ದರು.

ದಾರಿಯುದ್ದಕ್ಕೂ ಸಿದ್ದರಾಮಯ್ಯ ಅವರಿಗೆ ಘೋಷಣೆ ಕೂಗುತ್ತಾ ಸಂಭ್ರಮಾಚರಣೆ ಮಾಡಿದರು. ಕಾರಿನ ಮೇಲೆ ಹೂವಿನ ಮಳೆಯನ್ನೇ ಸುರಿಸಿದ ಅಭಿಮಾನಿಗಳು 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ' ಎಂದು ಕೂಗುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು.
ಇನ್ನು ಸಿದ್ದರಾಮಯ್ಯ ಜೊತೆ ದೆಹಲಿಗೆ ತೆರಳಿದ ಆಪ್ತ ಶಾಸಕರಲ್ಲಿ ಬೈರತಿ ಸುರೇಶ್ ಪ್ರಮುಖರಾಗಿದ್ದಾರೆ. ಮೊದಲಿನಿಂದಲೇ ಬೈರತಿ ಸುರೇಶ್ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡವರು, ಈ ಬಾರಿ ಬೈರತಿ ಸುರೇಶ್ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಇದೆ.
ದುಬಾರಿ ಕಾರು ಉಡುಗೊರೆ ನೀಡಿದ್ದ ಬೈರತಿ ಸುರೇಶ್
ಶಾಸಕ ಬೈರತಿ ಸುರೇಶ್ ಸಿದ್ದರಾಮಯ್ಯ ಅವರಿಗೆ 2019ರಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡುವ ಮೂಲಕ ಸುದ್ದಿಯಾಗಿದ್ದರು. ಒಂದೂವರೆ ಕೋಟಿ ಮೌಲ್ಯದ ಕಪ್ಪು ಬಣ್ಣದ ಬೆಂಜ್ ಕಾರು ಉಡುಗೊರೆಯಾಗಿ ನೀಡುವ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿತ್ತು, ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಕಾರನ್ನ ಹಸ್ತಾಂತರ ಮಾಡಲಾಗಿತ್ತು.
ಸಿದ್ದರಾಮಯ್ಯ ಅವರನ್ನು ಬೈರತಿ ಸುರೇಶ್ ಕರೆದುಕೊಂಡು ಬಂದದ್ದು ಕೂಡ ಇದೇ ಕಾರಿನಲ್ಲಿ. ಇದಕ್ಕೂ ಮುನ್ನ ಅಭಿಮಾನಿಯೊಬ್ಬರು 70 ಲಕ್ಷ ಬೆಲೆ ಬಾಳುವ ಹುಬ್ಲೊಟ್ ವಾಚ್ ಉಡುಗೊರೆಯಾಗಿ ನೀಡಿದ್ದು ಕೂಡ ವಿವಾದ ಸೃಷ್ಟಿಸಿತ್ತು.












Click it and Unblock the Notifications