3 ಬ್ಯುಸಿನೆಸ್ ಕಾರಿಡಾರ್ ಯೋಜನೆ: ಬೆಂಗಳೂರು ಸೇರಿ ಕರ್ನಾಟಕದ 6 ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ!
ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಶ್ವಮಟ್ಟದ ನಗರಗಳಿಗೆ ಬೆಂಗಳೂರು ನಗರವು ಪೈಪೋಟಿ ಕೊಡುತ್ತಿದೆ. ಇದೀಗ ಮೂರು ಪ್ರಮುಖ ಕಾರಿಡಾರ್ ಯೋಜನೆಗಳು ಬೆಂಗಳೂರಿಗೆ ಬಂಪರ್ ತಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದಕ್ಕೆ ಬೆಂಗಳೂರಿನ ಮೂರು ಪ್ರಮುಖ ಕಾರಿಡಾರ್ ಯೋಜನೆಗಳು ಸಹಕಾರಿಯಾಗಿವೆ ಎನ್ನುತ್ತಿದ್ದಾರೆ ರಿಯಲ್ ಎಸ್ಟೇಟ್ ತಜ್ಞರು.
ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ಬೃಹತ್ ಬ್ಯೂಸಿನೆಸ್ ಕಾರಿಡಾರ್‌ಗಳಾದ - CBIC, BMIC ಹಾಗೂ HBIC ನ ಮಹತ್ವದ ಹಾಗೂ ಬೃಹತ್ ಯೋಜನೆಗಳಿಂದ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ. ಈ ಕಾರಿಡಾರ್‌ಗಳು ಸಂಪರ್ಕ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಹೂಡಿಕೆಯ ಗುರಿಯನ್ನು ಹೊಂದಿವೆ. ಪ್ರಾಥಮಿಕವಾಗಿ ಈ ಕಾರಿಡಾರ್‌ಗಳ ಮೂಲಕ ಈ ರೀತಿಯ ಸಂಪರ್ಕಿತ ಹೊಸ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಮಾರುಕಟ್ಟೆ ಸೃಷ್ಟಿ ಆಗಲಿದೆ. ಈ ಯೋಜನೆಗಳ ಮೂಲಕ ಬೆಂಗಳೂರು ನಗರವು 2035ರ ವೇಳೆಗೆ ಹೊಸ ಎತ್ತರಕ್ಕೆ ಬೆಳೆಯಲಿದೆ. ಅಲ್ಲದೇ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಬಂಗಾರಕ್ಕೆ ಸಮಾನವಾಗಿ ಬದಲಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಬೆಂಗಳೂರು ಭಾರತದ ಮುಂದಿನ ಕೈಗಾರಿಕಾ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ. ಇದನ್ನು CBIC, BMIC ಮತ್ತು HBIC ನಂತಹ ದೊಡ್ಡ ಬ್ಯೂಸಿನೆಸ್ ಕಾರಿಡಾರ್ ಯೋಜನೆಗಳು ಸಾಧ್ಯವಾಗಿಸುತ್ತಿವೆ. ಈ ರೀತಿಯ ಬ್ಯೂಸಿನೆಸ್ ಕಾರಿಡಾರ್‌ಗಳು ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ವರದಾನವಾಗಲಿದೆ ಎಂದು Trade Brains ವರದಿ ಮಾಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹೊಸ ನಿವಾಸಿಗಳು, ಉದ್ಯೋಗಗಳು ಮತ್ತು ಹೊಸ ವಸತಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಭವಿಷ್ಯದ ದೊಡ್ಡ ಪ್ರದೇಶ ಸೃಷ್ಟಿ ಆಗಲಿದೆ ಎಂದು ಹೇಳಲಾಗಿದೆ.
ಚೆನ್ನೈ - ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (CBIC): CBIC ಚೆನ್ನೈ ಹಾಗೂ ಬೆಂಗಳೂರಿನ ನಡುವೆ ನಿರಂತರ ಪ್ರಾದೇಶಿಕ ಸಂಪರ್ಕವನ್ನು ಒದಗಿಸುವ ಏಕೈಕ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. ಈ ಯೋಜನೆಯಿಂದ ಬೆಂಗಳೂರು ಹಾಗೂ ಚೆನ್ನೈನ ನಡುವೆ ಸಂಚಾರವು ಕೇವಲ ಮೂರು ಗಂಟೆಗಳಿಗಿಂತ ಕಡಿಮೆ ಆಗಲಿದೆ. ಕಾರಿಡಾರ್‌ನಲ್ಲಿ, ವಿಶೇಷವಾಗಿ ಹೊಸಕೋಟೆ ಮತ್ತು ತುಮಕೂರಿನಂತಹ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.
ಬೆಂಗಳೂರು-ಮುಂಬೈ ಬ್ಯುಸಿನೆಸ್ ಕಾರಿಡಾರ್ (BMIC): ಇನ್ನು ಭಾರತದ ಎರಡು ಪ್ರಮುಖ ಕೈಗಾರಿಕಾ ಪ್ರದೇಶ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ ಇತರ ಪ್ರಮುಖ ಪ್ರದೇಶಗಳಿಗೆ ಈ ಯೋಜನೆ ಸಂಪರ್ಕ ಕಲ್ಪಿಸುತ್ತದೆ. ಆರಂಭಿಕ ಹಂತವು ಧಾರವಾಡ ಮತ್ತು ಸತಾರಾದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಸಿದ್ಧಪಡಿಸಲಾಗುತ್ತಿರುವ ದೊಡ್ಡ ಭೂಪ್ರದೇಶಗಳನ್ನು ಒಳಗೊಂಡಿತ್ತು. ಕಾರಿಡಾರ್‌ನ ಪ್ರಗತಿಯು ಈಗಾಗಲೇ ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ವಸತಿ ಪ್ರದೇಶ ಅಭಿವೃದ್ಧಿ ಹಾಗೂ ರಿಯಲ್ ಎಸ್ಟೇಟ್ ಬೂಸ್ಟ್‌ಗೆ ಕಾರಣವಾಗಿದೆ.
ಹೈದರಾಬಾದ್ - ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (HBIC): ಹೈದರಾಬಾದ್ - ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (HBIC) ದಕ್ಷಿಣ ರಾಜ್ಯಗಳಾದ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಎರಡು ಪ್ರಮುಖ ಆರ್ಥಿಕ ಕ್ಲಸ್ಟರ್‌ಗಳನ್ನು ಬೆಸೆಯುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಕರ್ನೂಲ್ ಜಿಲ್ಲೆಯಲ್ಲಿರುವ ಓರ್ವಕಲ್ ಕೈಗಾರಿಕಾ ಪ್ರದೇಶದಂತಹ ಹಲವಾರು ಕೈಗಾರಿಕಾ ಮೆಗಾ ಪ್ರದೇಶಗಳು ಸೇರಿವೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಂತಹ ಸ್ಥಳಗಳಲ್ಲಿ ಈ ಯೋಜನೆಯಿಂದ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.












Click it and Unblock the Notifications