ವಾರದ ಹಿಂದೆ ಇತ್ತು ಈಗಿಲ್ಲ ಬೆಂಗಳೂರು ಪೊಲೀಸ್ ಕಚೇರಿ ಬಳಿಯ ಬಸ್ ಶೆಲ್ಟರ್; ದೂರು ದಾಖಲು!
ಬೆಂಗಳೂರು ಅಕ್ಟೋಬರ್ 6: ಬೆಂಗಳೂರಿನಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರ ಬೆಲೆಬಾಳುವ ವಸ್ತುಗಳಿಗೆ ಕೈ ಹಾಕುತ್ತಿದ್ದ ಕದೀಮರು ಸದ್ಯ ಬಸ್ ಶೆಲ್ಟರ್ (ಬಸ್ ತಂಗುದಾಣ) ಅನ್ನೇ ಕದ್ದಿದ್ದಾರೆ. 10 ಲಕ್ಷ ರೂಪಾಯಿ ಮೌಲ್ಯದ ಸ್ಟೇನ್‌ಲೆಸ್ ಸ್ಟೀಲ್ ರಚನೆಯಿಂದ ಭದ್ರವಾಗಿದ್ದ ಹೊಚ್ಚಹೊಸ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಶೆಲ್ಟರ್ ಅನ್ನು ಕದೀಮರು ಎತ್ತಂಗಡಿ ಮಾಡಿದ್ದಾರೆ.
ಇದನ್ನು ಜನನಿಬಿಡ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಸ್ಥಾಪಿಸಲಾಗಿತ್ತು. ಆದರೆ ಸ್ಥಾಪಿಸಿದ ಒಂದು ವಾರದಲ್ಲೇ ನಿಗೂಢವಾಗಿ ಕಣ್ಮರೆಯಾಗಿದೆ. ವಿಧಾನಸೌಧದಿಂದ ಕೇವಲ 1ಕಿಮೀ ದೂರದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಹಿಂದೆ ಬಸ್ ಶೆಲ್ಟರ್ ಸ್ಥಾಪಿಸಲಾಗಿತ್ತು.

ಬಸ್ ತಂಗುದಾಣವನ್ನು ಆಗಸ್ಟ್ 21 ರಂದು ಸ್ಥಾಪಿಸಲಾಯಿತು. ಆಗಸ್ಟ್ 28 ರಂದು ಇದು ಕಾಣೆಯಾಗಿದೆ. ಘಟನೆ ನಡೆದು ಒಂದು ತಿಂಗಳ ನಂತರ ಸೆಪ್ಟೆಂಬರ್ 30 ರಂದು ಈ ಬಗ್ಗೆ ದೂರು ದಾಖಲಾಗಿದೆ. BMTC ಬಸ್ ಶೆಲ್ಟರ್‌ಗಳನ್ನು ನಿರ್ಮಿಸುವ ಜವಾಬ್ದಾರಿಯುತ ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿರೆಡ್ಡಿ ಅವರು ಕಳ್ಳತನದ ಬಗ್ಗೆ ವರದಿ ಮಾಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ರೆಡ್ಡಿ ಅವರ ದೂರಿನ ಪ್ರಕಾರ, ಬಸ್ ಶೆಲ್ಟರ್ ನಾಪತ್ತೆಯಾಗಿರುವುದನ್ನು ಗಮನಿಸಿದ ನಂತರ, ರೆಡ್ಡಿ ಮತ್ತು ಅವರ ತಂಡವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ವಿಚಾರಿಸಿದೆ. ಅವರು ಅದರ ಕಣ್ಮರೆಯಾದ ಬಗ್ಗೆ ಯಾವುದೇ ಯಾಔಉದೇ ಮಾಹಿತಿ ಇಲ್ಲ ಎಂದಿದ್ದಾರೆ.
ಲಿಂಗರಾಜಪುರ, ಹೆಣ್ಣೂರು, ಬಾಣಸವಾಡಿ, ಪುಲಿಕೇಶಿನಗರ, ಗಂಗೇನಹಳ್ಳಿ, ಭೂಪಸಂದ್ರ, ಹೆಬ್ಬಾಳ, ಯಲಹಂಕ ಮುಂತಾದ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಈ ಬಸ್ ಶೆಲ್ಟರ್ ಆಶ್ರಯವಾಗಿತ್ತು.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಹತ್ತಿರದ ಕಟ್ಟಡಗಳಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರಿನ ಬಸ್ ಶೆಲ್ಟರ್‌ಗಳು ನಾಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಎಚ್‌ಆರ್‌ಬಿಆರ್ ಲೇಔಟ್ ಮತ್ತು ಕಲ್ಯಾಣ್ ನಗರದಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು. ಈ ಬಸ್ ಶೆಲ್ಟರ್‌ಗಳನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದ್ದು, ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಹೀಗಾಗಿ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ಅಂಥವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ. ವಾಹನಗಳ ಸಂಚಾರದಿಂದ ಈ ರಸ್ತೆ ಯಾವಾಗಲೂ ತುಂಬಿರುತ್ತದೆ. ಬೆಂಗಳೂರು ಪೊಲೀಸ್ ಮುಖ್ಯಸ್ಥರ ಕಚೇರಿ ಬಳಿಯ ಬಸ್ ಶೆಲ್ಟರ್ ಅನ್ನೇ ಕಳ್ಳರು ಸುಲಭವಾಗಿ ಕದ್ದಿದ್ದಾರೆ ಅಂದರೆ ಇನ್ನೂ ಬೇರೆಡೆ ಇರುವ ಬಸ್ ಸೆಲ್ಟರ್ ಕಥೆ ಏನು ಎನ್ನುವ ಪ್ರಶ್ನೆ ಮೂಡಿದೆ. ಪೊಲೀಸರು ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications