ಆಂಧ್ರಪ್ರದೇಶಕ್ಕೆ ಕೆಎಸ್ಆರ್ ಟಿಸಿ ಬಸ್ ಸೇವೆ ಸ್ಥಗಿತ

ಅಖಂಡ ಆಂಧ್ರಪದೇಶಕ್ಕೆ ಆಗ್ರಹಿಸಿ ಗುರುವಾರ ಸಂಜೆಯಿಂದಲೇ ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ಆದ್ದರಿಂದ ಕೆಎಸ್ಆರ್ ಟಿಸಿ 451 ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಪ್ರತಿಭಟನೆ ಕಾವು ಕಡಿಮೆಯಾಗುವ ತನಕ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಎಸ್ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಅಶೋಕ್ ಕುಮಾರ್, ಆಂಧ್ರಪ್ರದೇಶಕ್ಕೆ ಸಾಗುವ 451 ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇವುಗಳಲ್ಲಿ ವೋಲ್ವೋ, ಐರಾವತ, ಸಾಮಾನ್ಯ ಬಸ್ ಗಳು ಸೇರಿವೆ.
ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಸಂಸ್ಥಗೆ ಪ್ರತಿದಿನ 35 ರಿಂದ 45 ಲಕ್ಷ ನಷ್ಟವಾಗುತ್ತಿದೆ ಎಂದು ಅಶೋಕ್ ಹೇಳಿದ್ದಾರೆ. ಮೂರುದಿನಗಳಲ್ಲಿ ಆಂಧ್ರಪ್ರದೇಶದ ಪರಿಸ್ಥಿತಿಯನ್ನು ನೋಡಿ ಬಸ್ ಸಂಚಾರ ಆರಂಭಿಸುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಹೈದರಾಬಾದ್ ಪ್ರತಿದಿನ ಬೆಂಗಳೂರಿನಿಂದ 15 ವೋಲ್ವೋ ಬಸ್ ಸಂಚರಿಸುತ್ತಿತ್ತು. ಅವುಗಳನ್ನು ನಿಲ್ಲಿಸಲಾಗಿದೆ ಸಂಸ್ಥೆಯ ಬಸ್ ಗಳು ಕೋಲಾರ, ಚಿಕ್ಕಬಳ್ಳಾಪುರ, ತಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಹಾಗೂ ಬೀದರ್ ಜಿಲ್ಲೆಗಳಲ್ಲಿ ಕರ್ನಾಟಕದ ಗಡಿ ಭಾಗದವರೆಗೆ ಮಾತ್ರ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು. (ತೆಲಂಗಾಣ ಪ್ರತಿಭಟನೆ, ಕೆಎಸ್ಆರ್ ಟಿಸಿಗೆ ನಷ್ಟ)
ಆಗಸ್ಟ್ ತಿಂಗಳಿನಲ್ಲಿಯೂ ತೆಲಂಗಾಣ ಪ್ರತಿಭಟನೆ ಹಿನ್ನಲೆಯಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿ ಸ್ವಲ್ಪ ತಿಳಿಯಾದ ಬಳಿಕ ಸಂಚಾರ ಪ್ರಾರಂಭಿಸಲಾಗಿತ್ತು. ಸದ್ಯ ಭಾರೀ ಪ್ರತಿಭಟನೆ ಹಿನ್ನಲೆಯಲ್ಲಿ ಪುನಃ ಸಂಚಾರ ಸ್ಥಗಿತಗೊಂಡಿದೆ.












Click it and Unblock the Notifications