ಬಸ್ ದುರಂತ: ವೋಲ್ವೊ ವಿನ್ಯಾಸ ಮಾರ್ಪಾಡಿಗೆ ಸೂಚನೆ
ಬೆಂಗಳೂರು, ಜ.27: ಒಂದೇ ಸಮನೆ ವೋಲ್ವೊ ಬಸ್ಸುಗಳು ದುರಂತಕ್ಕೀಡಾಗುತ್ತಿರುವುದನ್ನು ಕಂಡು ರಾಜ್ಯ ಸರಕಾರ ಎಚ್ಚೆತ್ತಿದೆ. ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವೋಲ್ವೊ ಬಸ್ ಉತ್ಪಾದನಾ ಕಂಪನಿಗೆ ಎಚ್ಚರಿಕೆ-ಮಿಶ್ರಿತ ಒಂದಷ್ಟು ಸಲಹೆಯನ್ನು ನೀಡಿದೆ.
ವೋಲ್ವೊ ಬಸ್ಸಿನ ವಿನ್ಯಾಸ, ಮಾದರಿಯನ್ನು ಬದಲಾಯಿಸಿಕೊಳ್ಳುವಂತೆ ವೋಲ್ವೊ ಬಸ್ ಉತ್ಪಾದನಾ ಕಂಪನಿಗೆ ಕರ್ನಾಟಕ ಸರ್ಕಾರ ಸೂಚಿಸಿದೆ. ವೋಲ್ವೊ ಬಸ್ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ, ಪ್ರಾಣ ಭೀತಿಯನ್ನು ನಿವಾರಿಸಿ ಭದ್ರತೆಯ ಖಾತ್ರಿಪಡಿಸುವ ನಿಟ್ಟಿನಲ್ಲಿ ಬಸ್ ರಚನಾ ಮಾದರಿ ಬದಲಾಯಿಸಿಕೊಳ್ಳುವುದು ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹೇಳಿದೆ.
ಆದರೆ Volvo ಕಂಪನಿಯವರು ತಾವು ಅಂತಾರಾಷ್ಟ್ರೀಯ ಮಾನದಂಡಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ನಮ್ಮಲ್ಲೇನೂ ಲೋಪ ಇಲ್ಲ. ಅಪಘಾತಗಳಿಗೆ ಬೇರೆಯದೂ ಕಾರಣಗಳಿರುತ್ತವೆ. ಅವುಗಳತ್ತ ಗಮನಹರಿಸಬೇಕು ಎಂದು ಮಾರುತ್ತರ ನೀಡಿದೆ.[ಜಬ್ಬಾರ್ ಅಪಘಾತ: ಓನರ್ ಉಮಾ ಇನ್ನೂ ಬಂಧನವಿಲ್ಲ]

3೦೦ ಲೀಟರ್ ಡೀಸಲ್ ಟ್ಯಾಂಕನ್ನು ಇಂಜಿನ್ ಪಕ್ಕದಲ್ಲೇ ಜೋಡಣೆಯಾಗಿರುತ್ತದೆ. ಅಲ್ಲದೆ ಟ್ಯಾಂಕಿನ ಸಾಮರ್ಥ್ಯ ಈಗ 300 ರಿಂದ 600 ಲೀಟರಿಗೆ ಹೆಚ್ಚಿದೆ ಮತ್ತು ಈ ಟ್ಯಾಂಕುಗಳನ್ನು ಫೈಬರ್ ನಿಂದ ತಯಾರಿಸಲ್ಪಟ್ಟಿದ್ದು, ಅದೂ ಸಹ ತಕ್ಷಣವೇ ಬೆಂಕಿ ಹೊತ್ತಿಕೊಳ್ಳಲು ಸಹಾಯಕವಾವುತ್ತದೆ. ಹಾಗಾಗಿ ವೋಲ್ವೊ ಬಸ್ಸುಗಳ ತಯಾರಿಕೆಯಲ್ಲಿ ಮಾರ್ಪಾಟು ಅಗತ್ಯ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡುತ್ತ ಹೇಳಿದ್ದಾರೆ.
ಇದಲ್ಲದೆ, ವೋಲ್ವೊ ಬಸ್ಸುಗಳಿಗೆ ಮೂರನೆಯ ಬಾಗಿಲು (ತುರ್ತು ನಿರ್ಗಮನ ಬಾಗಿಲು) ಅಳವಡಿಸಬೇಕು. ವೋಲ್ವೊ ಬಸ್ಸುಗಳು ದುರಂತಕ್ಕೀಡಾದರೆ ಅದರಿಂದ ಅಪಾಯಗಳೂ ದೊಡ್ಡ ಪ್ರಮಾಣದಲ್ಲೇ ಇರುತ್ತವೆ. ಹಾಗಾಗಿ ಚಾಲಕರ ಕಾರ್ಯಕ್ಷಮತೆ ಬಗ್ಗೆ ಹಾಗೂ ನಿರ್ವಾಹಕರ ಕಾರ್ಯಚಟುವಟಿಕೆಗಳ ಬಗ್ಗೆಯೂ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಶಿಫಾರಸ್ಸಿನಲ್ಲಿ ಸೂಚಿಸಲಾಗಿದೆ.[ಜಬ್ಬಾರ್ ಬಸ್ ಅಪಘಾತಕ್ಕೆ ಕಾರಣ ತಿಳಿಯಿತು]
ಒಟ್ಟಾರೆ, ತಜ್ಞರು ಹೇಳುವಂತೆ ಬಸ್ ವೇಗಕ್ಕೆ ಮಿತಿ ಹೇರುವುದೂ ಸೇರಿದಂತೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದ್ದರೂ ಈ ಕುರಿತು ರಾಷ್ಟ್ರೀಯ ನೀತಿಯೊಂದನ್ನು ರೂಪಿಸದೆ ಈ ಸಮಸ್ಯೆ ಪರಿಹಾರವಾಗದು. ನೀತಿಗಳು ಎಲ್ಲ ರಾಜ್ಯಗಳಿಗೂ, ಎಲ್ಲಾ ಅಪಘಾತಗಳಿಗೂ, ಎಲ್ಲ ಬಸ್ಸುಗಳಿಗೂ ಅನ್ವಯವಾಗುವಂತಿರಬೇಕು. ಸದ್ಯ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ಜಾರಿಗೆ ತಂದರೂ, ಅವೇನೂ ಜೀವಗಳನ್ನು ರಕ್ಷಿಸಲಾರದು. ಏಕೆಂದರೆ ಬಸ್ ನೋಂದಣಿ ಒಂದು ರಾಜ್ಯದಲ್ಲಿದ್ದು, ( ಜಬ್ಬಾರ್ ಟ್ರಾವೆಲ್ಸ್ ದುರಂದ ಪ್ರಕರಣದಲ್ಲಿ ಆಂಧ್ರ ಪ್ರದೇಶ) ಹಾಗೂ ಅದರ ಕಾರ್ಯಾಚರಣೆ ಇನ್ನೊಂದು ರಾಜ್ಯದಲ್ಲಿ (ಕರ್ನಾಟಕ) ಆಗಿರುವವರೆಗೂ ಪ್ರಯಾಣಿಕರು ತಮ್ಮ ಪ್ರಾಣಗಳನ್ನು ತಾವೇ ಕಾಪಾಡಿಕೊಳ್ಳಬೇಕಾದಂತಹ ದುಃಸ್ಥಿತಿಯಿರುತ್ತದೆ.












Click it and Unblock the Notifications