ಬುರೇವಿ ಚಂಡಮಾರುತ; ಬೆಂಗಳೂರಲ್ಲಿ ಬೆಳಗ್ಗೆಯೇ ಮಳೆ
ಬೆಂಗಳೂರು, ಡಿಸೆಂಬರ್ 03: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮುಂಜಾನೆಯೇ ಮಳೆ ಜನರಿಗೆ ಕಿರಿಕಿರಿ ಉಂಟು ಮಾಡಿದೆ. 'ಬುರೇವಿ' ಚಂಡಮಾರುತದ ಪರಿಣಾಮ ನಗರದಲ್ಲಿ ಡಿಸೆಂಬರ್ 5ರ ತನಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಗುರುವಾರ ಮುಂಜಾನೆಯೇ ನಗರದಲ್ಲಿ ತುಂತುರು ಮಳೆ ಸುರಿಯುತ್ತಿದೆ. ಬೆಳಗ್ಗೆ ವಾಕಿಂಗ್ ಹೊರಟವರು ಅದನ್ನು ರದ್ದು ಮಾಡಿ ಮನೆಯಲ್ಲಿಯೇ ಕುಳಿತರು. ಹಾಲು ತರಲು ಹೊರಟವರು ಛತ್ರಿಗಾಗಿ ಹುಡುಕುವಂತೆ ಆಯಿತು.

ನಗರದ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ವಿದ್ಯಾಪೀಠ ಸರ್ಕಲ್, ಮೈಸೂರು ರಸ್ತೆ, ಬಸವನಗುಡಿ, ಎನ್. ಆರ್. ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ ತುಂತುರು ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರೆದಿದೆ.
ಶ್ರೀಲಂಕಾ ಮತ್ತು ತಮಿಳುನಾಡು ಭಾಗಕ್ಕೆ ಅಪ್ಪಳಿಸುವ 'ಬುರೇವಿ' ಚಂಡಮಾರುತ ಕರ್ನಾಟಕದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಮಳೆಯಾಗಲಿದೆ. ಡಿಸೆಂಬರ್ 5ರ ತನಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಡಿಸೆಂಬರ್ 3 ಮತ್ತು 4 ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.












Click it and Unblock the Notifications